ನೆರಿಯಾದಲ್ಲಿ ಲಕ್ಷಾಂತರ ರೂ ಮೌಲ್ಯದ ಅಕ್ರಮ ಮರ ಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಅಕ್ರಮವಾಗಿ ಕಡಿದು ಸಾಗಾಟಕ್ಕೆ ಸಜ್ಜಾಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹಲಸು ಮತ್ತಿತರ ಜಾತಿಯ  ಮರಗಳ ತುಂಡುಗಳು ನೆರಿಯಾ ಗ್ರಾಮದಲ್ಲಿ ಗುರುವಾರ ಪತ್ತೆಯಾಗಿದ್ದು ಮನೆಯೊಂದಕ್ಕೆ ದಾಳಿ ನಡೆಸಿ ಮರವನ್ನು ಪತ್ತೆಹಚ್ಚಿದ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕುವ ಯತ್ನದಲ್ಲಿದ್ದಾರೆ ಎನ್ನಲಾಗಿದೆ.

ಎರಡು ಲೋಡ್ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಲು ಸಿದ್ಧವಾಗಿರುವ ಮರಗಳನ್ನು ಪೊಲೀಸರು ಅಥವಾ ಅರಣ್ಯ ಇಲಾಖಾಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿದ್ದು ಆರೋಪಿಗಳು ಮತ್ತು ಪೊಲೀಸರು ಹೊಂದಾಣಿಕೆ ವ್ಯವಹಾರ ಮಾತನಾಡಿಕೊಂಡು ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂಬ ಗಂಭೀರ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.

ಅಕ್ರಮವಾಗಿ ಕಡಿದ ಲಕ್ಷಾಂತರ ರೂಪಾಯಿ ಮೌಲ್ಯದ ಮರದ ಬಗ್ಗೆ ಸ್ಥಳೀಯರಿಗೆ ಮಾಹಿತಿಯಿದ್ದು  ಆರೋಪಿಗಳೊಂದಿಗೆ ಡೀಲಿಂಗ್ ನಡೆಸಿ ಪ್ರಕರಣವನ್ನು ಮುಚ್ಚಿ ಹಾಕಿದವರು ಅರಣ್ಯ ಇಲಾಖಾಧಿಕಾರಿಗಳೋ ಪೊಲೀಸರೋ ಎಂಬುದು ವ್ಯಾಪಕ ಚರ್ಚೆಗೂ ಸಂಶಯಕ್ಕೂ ಕಾರಣವಾಗಿದೆ.