ಮರಗಳ್ಳರ ದಸ್ತಗಿರಿ

ಬಂಟ್ವಾಳ : ಅಕ್ರಮ ಮರ ಸಾಗಾಟ ಪ್ರಕರಣ ಪತ್ತೆ ಹಚ್ಚಿರುವ ಬಂಟ್ವಾಳ ಅರಣ್ಯ ಇಲಾಖಾಧಿಕಾರಿಗಳು ತಾಲೂಕಿನ ಅನಂತಾಡಿ ಎಂಬಲ್ಲಿ ಮರದ ದಿಮ್ಮಿಗಳ ಸಹಿತ ನಾಲ್ಕು ಮಂದಿ ಆರೋಪಿಗಳನ್ನು ಬುಧವಾರ ದಸ್ತಗಿರಿ ಮಾಡಿದ್ದಾರೆ.     ಬಂಧಿತ ಆರೋಪಿಗಳನ್ನು ಸಜಿಪ ನಿವಾಸಿ ಅಶೋಕ, ಅನಂತಾಡಿ-ಕೊಂಬಿಲ ನಿವಾಸಿಗಳಾದ ದಿನೇಶ, ರಾಜೇಶ ಹಾಗೂ ರಾಮಕೃಷ್ಣ ಎಂದು ಹೆಸರಿಸಲಾಗಿದೆ. ಆರೋಪಿಗಳು ಓಮ್ನಿ ಕಾರಿನಲ್ಲಿ ಸಾಗುವಾನಿ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದರು ಎನ್ನಲಾಗಿದೆ.


ಚಿನ್ನಾಭರಣ ಕಳವು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕುಲಶೇಖರ ಬಳಿಯ ಪಾಲ್ದನೆ ನಿವಾಸಿ ಕವಿತಾ ಎಂಬವರು ಮನೆಗೆ ಬೀಗ ಹಾಕಿ ತವರು ಮನೆ ಮಂಜೇಶ್ವರಕ್ಕೆ ಹೋಗಿ ವಾಪಾಸ್ ಬರುವಷ್ಟರಲ್ಲಿ ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವು ಮಾಡಿದ್ದಾರೆ. ಮುಂಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಗಾಡ್ರೇಜ್ ಬೀಗ್ ಮುರಿದು ಸುಮಾರು 40 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.