ನೋಟು ಅಮಾನ್ಯ ಖಂಡಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಪ್ರತಿಭಟನೆಯಲ್ಲಿ ಶಾಸಕಿ ಶಕುಂತಲಾ ಮಾತಾಡಿದರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನೋಟು ಅಮಾನ್ಯ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನಡೆ ಮತ್ತು ಕೇಂದ್ರ ಸರಕಾರದ ಜನವಿರೋಧಿ ನೀತಿ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿದರು. “ದೇಶದಲ್ಲಿ ಬಡವರು, ರೈತರು, ಕೃಷಿಕರು ತಾವೇ ದುಡಿದು ಇಟ್ಟಿರುವ ಹಣವನ್ನು ಮರಳಿ ಪಡೆಯಲು ಬ್ಯಾಂಕಿನ ಮುಂದೆ ಕ್ಯೂನಿಂತಿರುವ ದೃಶ್ಯ ಕರುಳು ಹಿಂಡುತ್ತಿದೆ. ಇಂತಹ ಸ್ಥಿತಿ ಪ್ರಪಂಚದ ಇನ್ಯಾವ ದೇಶದಲ್ಲೂ ಜನರಿಗೆ ಬಂದಿರಲಾರದು. ಪ್ರಧಾನಿ ಮೋದಿ ಆಡಳಿತದ ಮೂಲಕ ಈ ಸ್ಥಿತಿ ಜನತೆಗೆ ಬಂದಿದೆ” ಎಂದವರು ಟೀಕಿಸಿದರು.

“50 ದಿನ ಕೊಡಿ ಎಲ್ಲಾ ವ್ಯವಸ್ಥೆ ಸರಿಮಾಡುತ್ತೇನೆ. ಕಪ್ಪುಹಣ ತರುತ್ತೇನೆ ಎಂದು ಹೇಳಿದರು. ವಿದೇಶದ ಕಪ್ಪು ಹಣ ತಂದು ಎಲ್ಲರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ಹಾಕುತ್ತೇನೆ ಎಂದರು. ಜನರಲ್ಲಿ ಆಸೆ ಹುಟ್ಟಿಸಿ ಆರ್ಥಿಕ ಸ್ಥಿತಿಯನ್ನು ಅಧಃಪತನಕ್ಕೆ ತಳ್ಳಿದರು” ಎಂದು ದೂರಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳಾ ಕಾರ್ಯಕರ್ತೆಯರು ಬಟ್ಟಲು, ಚಮಚದೊಂದಿಗೆ ಬಂದು ಬಟ್ಟಲು ಬಡಿದು ಮೋದಿಗೆ ಧಿಕ್ಕಾರ ಕೂಗಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.