ಪರಮೇಶ್ವರಗೆ ಮಹಿಳಾ ಆಯೋಗ ಸಮನ್ಸ್

ಬೆಂಗಳೂರು : ಅತ್ಯಾಚಾರದ ಬಗ್ಗೆ `ಅನುಚಿತ’ ಮತ್ತು `ಅಸಹ್ಯ’ ಹೇಳಿಕೆ ನೀಡಿರುವ ರಾಜ್ಯ ಗೃಹ ಸಚಿವ ಪರಮೇಶ್ವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ (ಎನ್‍ಸಿಡಬ್ಲ್ಯೂ) ಸಮನ್ಸ್ ಜಾರಿ ಮಾಡಿದೆ.

ಮುಂದಿನ ಐದು ದಿನದಲ್ಲಿ ಸಮನ್ಸಿಗೆ ಉತ್ತರಿಸಬೇಕೆಂದು ಎನ್‍ಸಿಡಬ್ಲ್ಯೂ ಪರಮೇಶ್ವರಗೆ ತಾಕೀತು ಮಾಡಿದೆ.

“ತನ್ನ ತಪ್ಪಿಗಾಗಿ ಗೃಹ ಸಚಿವ ಸಾರ್ವಜನಿಕ ಕ್ಷಮೆ ಯಾಚಿಸಬೇಕು ಮತ್ತು ಆ ಬಗ್ಗೆ ಆಯೋಗಕ್ಕೆ ಐದು ದಿನದೊಳಗೆ ಲಿಖಿತ ವಿವರಣೆ ನೀಡಬೇಕು. ತಪ್ಪಿದ್ದಲ್ಲಿ, ದಿಲ್ಲಿಯಲ್ಲಿರುವ ಆಯೋಗದೆದರು ಹಾಜರಾಗಬೇಕಾಗುತ್ತದೆ” ಎಂದು ಎನ್‍ಸಿಡಬ್ಲ್ಯೂ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಎಚ್ಚರಿಸಿದ್ದಾರೆ.

ಇದೇ ರೀತಿ ಆಯೋಗವು ಈ ಹಿಂದೆ, 2015 ಅಕ್ಟೋಬರ್ 8ರಂದು ಸಾಮೂಹಿಕ ಅತ್ಯಾಚಾರ ವಿಷಯದಲ್ಲಿ ವಿವಾದಾಸ್ಪದ ಮತ್ತು ಅನಪೇಕ್ಷಿತ ಹೇಳಿಕೆಗೆ ನೀಡಿದ್ದ ಮಾಜಿ ಗೃಹ ಸಚಿವ ಕೆ ಜೆ ಜಾರ್ಜ್ ವಿರುದ್ಧ ನೋಟಿಸು ಜಾರಿ ಮಾಡಿತ್ತು. ಆದರೆ ಪ್ರಸಕ್ತ ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಜಾರ್ಜ್ ಈ ನೋಟಿಸಿಗೆ ಮರುದಿನವೇ ಉತ್ತರಿಸಿ, ಸಾರ್ವಜನಿಕ ಕ್ಷಮೆ ಯಾಚಿಸಿದ್ದರು.