ಮೂರು ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಕೋಚ್ ಹೆಚ್ಚಳ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಮತ್ತು ಕಾಸರಗೋಡು ನಗರಗಳ ನಡುವೆ ಪ್ರತಿದಿನ ಸಾವಿರಾರು ಮಹಿಳೆಯರು ಶೈಕ್ಷಣಿಕ ಅಥವಾ ಔದ್ಯೋಗಿಕ ಉದ್ದೇಶಗಳಿಗೆ ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ.

ಮಹಿಳಾ ಪ್ರಯಾಣಿಕರ ಅವಶ್ಯಕತೆ ಮತ್ತು ಅವರ ಸುರಕ್ಷಿತತೆ ಮತ್ತು ಅನುಕೂಲತೆಗಾಗಿ ರೈಲ್ವೇಯು ಮೂರು ರೈಲುಗಳಾದ ಪರಶುರಾಮ ಎಕ್ಸಪ್ರೆಸ್, ಕೊಚ್ಚುವೆಲಿ ಎಕ್ಸಪ್ರೆಸ್ ಮತ್ತು ಯೆರ್ನಾಡು ಎಕ್ಸಪ್ರೆಸ್ಸುಗಳಲ್ಲಿ ಎರಡು ಕೋಚುಗಳನ್ನು ಮಹಿಳಾ ಪ್ರಯಾಣಿಕರಿಗಾಗಿ ಮೀಸಲಿಟ್ಟಿದೆ.

ಈ ಹಿಂದೆ ಈ ರೈಲುಗಳಲ್ಲಿ ಕೇವಲ ಒಂದು ಕೋಚನ್ನು ಮಾತ್ರ ಮಹಿಳೆಯರಿಗೆ ಮೀಸಲಿಡಲಾಗಿತ್ತು. ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದ್ದನ್ನು ಗಮನಿಸಿ ಕೋಚುಗಳನ್ನು ಹೆಚ್ಚಿಸಲಾಗಿದೆ.

“ಉದ್ಯೋಗಸ್ಥ ಮಹಿಳೆಯರಿಗೆ ರೈಲ್ವೇ ಸಾರಿಗೆ ಬಹಳ ಪ್ರಾಮುಖ್ಯವಾದುದು. ಮಹಿಳಾ ಪ್ರಯಾಣಿಕರ ವೇಗಗತಿಯ ಹೆಚ್ಚಳವನ್ನು ಗಮನಿಸಿ ಕಂಪಾಟ್ ್ಮೆಂಟುಗಳ ಸಂಖ್ಯೆಯನ್ನು ಎರಡು ಹೆಚ್ಚಿಸಲಾಗಿದೆ. ಅದೇ ರೀತಿ ಮಹಿಳೆಯರ ರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೈಲ್ವೇಯು ಭದ್ರತಾ ಸಿಬ್ಬಂದಿಯನ್ನು ಕೂಡ ನಿಯೋಜಿಸಿದೆ” ಎಂದು ಮಂಗಳೂರು ರೈಲ್ವೇ ನಿಲ್ದಾಣದ ಡೆಪ್ಯುಟಿ ಸ್ಟೇಷನ್ ಮ್ಯಾನೇಜರ್ ಕಿಶನಕುಮಾರ್ ಹೇಳಿದ್ದಾರೆ.

ಪ್ರತಿದಿನ ಕಾಸರಗೋಡಿನಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿನಿ ಅಶ್ವಿನಿ, “ಬಸ್ ಪ್ರಯಾಣಕ್ಕಿಂತ ರೈಲು ಪ್ರಯಾಣವೇ ಯೋಗ್ಯವಾದುದು, ಕಡಿಮೆ ವೆಚ್ಚದಲ್ಲಿ ಮಂಗಳೂರು ತಲುಪುತ್ತಿದ್ದೇನೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೆಚ್ಚು ಖರ್ಚು, ಧೀರ್ಘವಾದ ಪ್ರಯಾಣ ಮತ್ತು ಆಯಾಸದ ಅನುಭವವಾಗುತ್ತಿತ್ತು” ಎಂದು ಹೇಳಿದ್ದಾರೆ.

ಕಾಸರಗೋಡಿನಿಂದ ಮಂಗಳೂರಿಗೆ ಪ್ರತಿದಿನ ಸಂಚರಿಸುವ ಇನ್ನೊಬ್ಬ ಪ್ರಯಾಣಿಕೆ ಶ್ರೀಲತಾ, “ರಸ್ತೆ ಪ್ರಯಾಣಕ್ಕೆ ಹೋಲಿಸಿದರೆ ರೈಲು ಪ್ರಯಾಣ ಹೆಚ್ಚು ಅನುಕೂಲಕರ ಮತ್ತು ಕೈಗೆಟಕುವಂತದು. ರೈಲು ಪ್ರಯಾಣದಲ್ಲಿ ಮೂರು ತಿಂಗಳಿಗೆ ಕೇವಲ ರೂ 550 ಖರ್ಚಾಗುತ್ತದೆ, ಇದೆ ವೇಳೆ ಬಸ್ಸಿಗೆ ಇದು ಮೂರು ಪಟ್ಟು ಹೆಚ್ಚಳವಾಗುತ್ತದೆ” ಎಂದು ಹೇಳಿದ್ದಾರೆ.