‘ಮಹಿಳೆಯರೂ ತಲಾಖ್ ಹೇಳಬಹುದು’

ಸಾಂದರ್ಭಿಕ ಚಿತ್ರ

ಮುಸ್ಲಿಂ ಲಾ ಬೋರ್ಡ್ ಹೊಸ ರಾಹ 

ನವದೆಹಲಿ : ಮುಸ್ಲಿಂ ಸಮುದಾಯದಲ್ಲಿ ವಿವಾಹ ಒಂದು ಪರಸ್ಪರ ಒಪ್ಪಂದವಾಗಿದ್ದು ಮಹಿಳೆಯರೂ ಸಹ ತಮ್ಮ ಹಿತಾಸಕ್ತಿ ಮತ್ತು ಘನತೆಯನ್ನು ರಕ್ಷಿಸಿಕೊಳ್ಳಲು ನಿಖಾಹ್ ನಾಮಾದಲ್ಲಿ ಸೂಕ್ತ ನಿಯಮಗಳನ್ನು ಅಳವಡಿಸಲು ಆಗ್ರಹಿಸಬಹುದು ಎಂದು ಅಖಿಲ ಭಾರತದ ಮುಸ್ಲಿಂ ವೈಯ್ಯಕ್ತಿಕ ಕಾನೂನು ಮಂಡಲಿ ಸುಪ್ರೀಂಕೋರ್ಟಿಗೆ ಹೇಳಿದೆ.

ಮಂಡಲಿಯ ಪರ ವಕೀಲ ಏಜಾಜ್ ಮಕ್ಬೂಲ್ ಐವರು ಸದಸ್ಯರ ನ್ಯಾಯಪೀಠದ ಮುಂದೆ ತಮ್ಮ ವಾದ ಮಂಡಿಸಿದ್ದು, ಮುಸ್ಲಿಂ ಮಹಿಳೆಯರಿಗೆ ವಿವಾಹದ ಮುನ್ನ ನಾಲ್ಕು ಆಯ್ಕೆಗಳಿರುತ್ತವೆ ಎಂದು ಹೇಳಿದ್ದಾರೆ.

“1954ರ ವಿಶೇಷ ವಿವಾಹ ಕಾಯ್ದೆಯ ಅನುಸಾರ ಮುಸ್ಲಿಂ ಮಹಿಳೆಯರು ವಿವಾಹ ನೋಂದಣಿ ಮಾಡಿಸಲೂ ಆಗ್ರಹಿಸಬಹುದು ಎಂದು ಹೇಳಿದ್ದಾರೆ. ವಿವಾಹದ ಸಂದರ್ಭದಲ್ಲಿ ತನ್ನ ಪತಿ ತಲಾಖ್ ಹೇಳಕೂಡದು ಎಂದು ಷರತ್ತು ವಿಧಿಸುವ ಹಕ್ಕು ಮುಸ್ಲಿಂ ಮಹಿಳೆಯರಿಗೆ ಇರುತ್ತದೆ. ಅಲ್ಲದೆ ಸ್ವತಃ ಎಲ್ಲ ಸ್ವರೂಪಗಳಲ್ಲೂ ಮಹಿಳೆಯರಿಗೆ ತ್ರಿವಳಿ ತಲಾಖ್ ಮೂಲಕ ಗಂಡನಿಂದ ವಿಚ್ಚೇದನ ಪಡೆಯುವ ಹಕ್ಕು ಇರುತ್ತದೆ” ಎಂದು ಮಂಡಲಿ ಹೇಳಿದೆ.

ತನ್ನ ಹೆಂಡತಿಗೆ ತಲಾಖ್ ಹೇಳುವ ಹಕ್ಕನ್ನು ಗಂಡನಾದವನು ನೀಡಬಹುದಾದರೂ ಅವನಿಗೂ ಇರುವ ತಲಾಖ್ ಹೇಳುವ ಹಕ್ಕು ಕಸಿದುಕೊಳ್ಳಲಾಗುವುದಿಲ್ಲ ಎಂದು ಮಂಡಲಿ ವಾದಿಸಿದೆ.

ಬಹುಪತ್ನಿತ್ವವನ್ನು ಕುರಿತಂತೆ ಮಂಡಲಿ ಖುರಾನ್, ಹಡಿತ್ ಮತ್ತಿತರ ಗ್ರಾಂಥಿಕ ಉಲ್ಲೇಖಗಳನ್ನು ಮಂಡಿಸಿದ್ದು ಮುಸ್ಲಿಂ ಪುರುಷರಿಗೆ ನಾಲ್ಕು ವಿವಾಹವಾಗುವ ಹಕ್ಕು ಇರುವುದನ್ನು ಪ್ರತಿಪಾದಿಸಿದೆ. ಇಸ್ಲಾಂನಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇದ್ದರೂ ಅದನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಮಂಡಲಿ ಹೇಳಿದೆ.

ಆದರೆ ಮಹಿಳೆಯರ ಬಗ್ಗೆ ಇರುವ ಅನುಕಂಪ ಮತ್ತು ಕಾಳಜಿಯ ವತಿಯಿಂದ ಬಹುಪತ್ನಿತ್ವಕ್ಕೆ ಕೆಲವೊಮ್ಮೆ ಅನುಮತಿ ನೀಡಲಾಗುತ್ತದೆ ಎಂದು ಮಂಡಲಿ ವಾದಿಸಿದೆ.