ಬೆಂಗಳೂರು ಘಟನೆ ವಿರೋಧಿಸಿ ಜನವರಿ 21ರಂದು ದೇಶದಾದ್ಯಂತ ಬೀದಿಗಿಳಿಯಲಿರುವ ಮಹಿಳೆಯರು

ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿರುವ #ಐ ವಿಲ್ ಗೋ ಔಟ್

ಬೆಂಗಳೂರು : ಬೆಂಗಳೂರಿನಲ್ಲಿ ಹೊಸವರ್ಷಾಗಮನದ ಆಚರಣೆ ಸಂದರ್ಭ ಯುವತಿಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ಕಿರುಕುಳ ಹಾಗೂ ಈ ಘಟನೆಯ ನಂತರ ಕೆಲ ರಾಜಕಾರಣಿಗಳು ಮಹಿಳೆಯರನ್ನೇ ದೂಷಿಸಿ ನೀಡಿದ ಅಸ್ವಾಗತಾರ್ಹ ಹೇಳಿಕೆಗಳನ್ನು ವಿರೋಧಿಸಿ ದೇಶದಾದ್ಯಂತ ಜನವರಿ 21ರಂದು ಮಹಿಳಾ ಸಂಘಟನೆಗಳು ರ್ಯಾಲಿಗಳನ್ನು ಆಯೋಜಿಸಲು ನಿರ್ಧರಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿ #ಐ ವಿಲ್ ಗೋಔಟ್ ಎಂಬ ಹ್ಯಾಶ್ ಟ್ಯಾಗಿನೊಂದಿಗೆ ನಡೆಸಲಾಗುತ್ತಿರುವ ಈ ಅಭಿಯಾನದಂಗವಾಗಿ ಆಯೋಜಿಸಲಾಗುವ ಪ್ರತಿಭಟನೆ ವಾಷಿಂಗ್ಟನ್ನಿನಲ್ಲಿ  ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಮರುದಿನ ಅವರ ಮಹಿಳಾ ವಿರೋಧಿ ಧೋರಣೆಗಳ ವಿರುದ್ಧ ನಡೆಯಲಿರುವ `ಮಿಲಿಯನ್ ವಿಮೆನ್ ಮಾರ್ಚ್’ಗೆ ಸಮಾನಾಂತರವಾಗಿ ನಡೆಯಲಿವೆ.

ಬೆಂಗಳೂರಿನ ಘಟನೆಯ ನಂತರ ರಾಜ್ಯ ಗೃಹ ಸಚಿವರು ಸುದ್ದಿವಾಹಿನಿಗಳೊಂದಿಗೆ ಮಾತನಾಡುತ್ತಾ “ಇಂತಹ ಘಟನೆಗಳು ನಡೆಯುತ್ತಿರುತ್ತವೆ” ಎಂದು ಹೇಳಿದ್ದರೆ, ಇನ್ನೊಬ್ಬ ರಾಜಕಾರಣಿ ಮಹಿಳೆಯರು ಅನುಸರಿಸುತ್ತಿರುವ ಪಾಶ್ಚಿಮಾತ್ಯ ಸಂಸ್ಕøತಿಯನ್ನು ದೂಷಿಸಿದ್ದರಲ್ಲದೆ  ತಡರಾತ್ರಿಯವರೆಗೆ ಮನೆಯಿಂದ ಹೊರಗಿರುವುದು ಹಾಗೂ ಕನಿಷ್ಠ ಬಟ್ಟೆಗಳನ್ನು ಧರಿಸುವುದು ಇಂತಹ ಘಟನೆಗಳಿಗೆ ಕಾರಣ ಎಂದಿದ್ದರು.

“ಇಂತಹ ಒಂದು ಘಟನೆ ಬೆಂಗಳೂರು ನಗರದಲ್ಲಿ, ಅದು ಕೂಡ ಜನಜಂಗುಳಿಯಿರುವ ಕಡೆ ನಡೆದಿರುವುದು ಆಘಾತಕಾರಿ” ಎನ್ನುತ್ತಾರೆ  ಮಹಿಳೆಯರ ವಿರುದ್ಧದ ಕಿರುಕುಳ ಪ್ರಕರಣಗಳ ವರದಿಗಳನ್ನು ಸಂಗ್ರಹಿಸಿ ಹಾಗೂ ಮಹಿಳೆಯರಿಗೆ ಅಸುರಕ್ಷಿತವಾದ ಪ್ರದೇಶಗಳನ್ನು ಗುರುತಿಸುವ ಆನ್ ಲೈನ್ ಯೋಜನೆ ಸೇಫ್ ಸಿಟಿ ಇದರ ಸ್ಥಾಪಕಿ ಎಲ್ಸಾ ಮಾರೀ ಡಿ’ಸಿಲ್ವ.

“ಮಹಿಳೆಯರ ಸುರಕ್ಷತೆಗೆ ಜವಾಬ್ದಾರರಾದ  ಪ್ರಾಧಿಕಾರಗಳಿಂದ ನಾವು ಕೇಳಿದ ಪ್ರತಿಕ್ರಿಯೆಗಳು ಕೂಡ ಕಳವಳಕಾರಿ” ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಭಾರತದ ಐಟಿ ರಾಜಧಾನಿ ಎಂದೇ ಖ್ಯಾತವಾಗಿರುವ ಬೆಂಗಳೂರು ನಗರವು ಅತ್ಯಂತ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗುವ ದೆಹಲಿಗೆ ಹೋಲಿಸಿದಾಗ ಮಹಿಳೆಯರ ಪಾಲಿಗೆ ಸಾಕಷ್ಟು ಸುರಕ್ಷಿತವೆಂಬ ಭಾವನೆಯಿತ್ತಾದರೂ ಇತ್ತೀಚಿಗಿನ ಘಟನೆ ಈ ಗ್ರಹಿಕೆಯನ್ನು ಸುಳ್ಳಾಗಿಸಿದೆ.

ಭಾರತದಲ್ಲಿ 2015ರಲ್ಲಿ 34,000ಕ್ಕಿಂತಲೂ ಅಧಿಕ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆಯೆಂದು ನ್ಯಾಷನಲ್ ಕ್ರೈಂ ರೆಕಾಡ್ರ್ಸ್ ಬ್ಯುರೋ ಅಂಕಿಸಂಖ್ಯೆಗಳು ಹೇಳುತ್ತವೆ. ಇನ್ನೂ ಹೆಚ್ಚು ಪ್ರಕರಣಗಳು ನಡೆದಿರುವ ಸಾಧ್ಯತೆಗಳು ಅಧಿಕವಾದರೂ ಹೆಚ್ಚಿನ ಪ್ರಕರಣಗಳಲ್ಲಿ ಮಹಿಳೆಯರು ಮರ್ಯಾದೆಗೆ ಅಂಜಿ ದೂರು ನೀಡಲು ಹಿಂಜರಿಯುತ್ತಾರೆ.

ಜನವರಿ 21ರಂದು ಭಾರತದಲ್ಲಿ ಕನಿಷ್ಠ ಒಂದು ಡಜನ್ ನಗರಗಳಲ್ಲಿ ನಡೆಯಲಿರುವ ಪ್ರತಿಭಟನೆಗಳು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳು ಹಾಗೂ ಪ್ರತಿಯೊಂದು ಘಟನೆಗೂ ಮಹಿಳೆಯರನ್ನೇ ದೂಷಿಸುವ ಮನೋವೃತ್ತಿಯ ವಿರುದ್ಧ ಜನಜಾಗೃತಿ ಮೂಡಿಸಲು ಯಶಸ್ವಿಯಾಗಬಹುದೆಂಬ ವಿಶ್ವಾಸ  ಮುಂಬೈಯಲ್ಲಿ ಪ್ರತಿಭಟನೆಯನ್ನು ಆಯೋಜಿಸಲಿರುವ ಡಿ’ಸಿಲ್ವ ಹೇಳುತ್ತಾರೆ.

“ದೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ಹಿಂಸೆ ಹಾಗೂ ದೌರ್ಜನ್ಯಗಳ ಬಗ್ಗೆ ನಾವು ಸಾಕಷ್ಟು ಮಾತನಾಡುತ್ತಿಲ್ಲ ಹಾಗೂ ಅದನ್ನು ತಡೆಯಲೂ ಸಾಕಷ್ಟು ಶ್ರಮಿಸಲಾಗುತ್ತಿಲ್ಲ” ಎಂದು ಅವರು ಖೇದ ವ್ಯಕ್ತಪಡಿಸುತ್ತಾರಲ್ಲದೆ, “ಮಹಿಳೆಯರ ಸುರಕ್ಷತೆಗೆ ಸಾಕಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ನಾವು ನಮ್ಮ ಸರಕಾರಗಳ ಮೇಲೆ ಒತ್ತಡ ಹೇರಬೇಕಲ್ಲದೆ ಮಹಿಳೆಯರ ಬಗ್ಗೆ ಸಮಾಜದ ಧೋರಣೆಯನ್ನು ಬದಲಾಯಿಸಲೂ ಶ್ರಮಿಸಬೇಕು” ಎಂದು ಬಲವಾಗಿ ಪ್ರತಿಪಾದಿಸುತ್ತಾರೆ.