ಹೆದ್ದಾರಿ ಮದ್ಯದಂಗಡಿ ಹಳ್ಳಿಗೆ ಸ್ಥಳಾಂತರಗೊಳಿಸುವುದಕ್ಕೆ ಮಹಿಳೆಯರ ವಿರೋಧ

ಒಡಿಶಾದಲ್ಲಿ ಹೆದ್ದಾರಿಗಳಿಗೆ ಸಮೀಪವಿರುವ ಗ್ರಾಮಗಳಿಗೆ ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸುವ ವಿರುದ್ಧ ಹೋರಾಟಕ್ಕೆ ಸಂಬಂಧಿಸಿ  ಕೋಮ್ನಾ ಪೊಲೀಸರು 16 ಗ್ರಾಮಸ್ಥರ ಮೇಲೆ ದೂರು ದಾಖಲಿಸಿದ್ದಾರೆ. ಸಂಬಲ್ಪುರದ ಸಖೋಟೋರಾ ಗ್ರಾಮದಲ್ಲಿ ಹೆದ್ದಾರಿಗಳಿಂದ ಗ್ರಾಮದೊಳಗೆ ಮದ್ಯದಂಗಡಿಗಳನ್ನು ಸ್ಥಳಾಂತರಿಸುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಮದ್ಯದಂಗಡಿಗಳ ಮೇಲೆ ದಾಳಿ ಮಾಡಿ ಬೆಂಕಿ ಇಟ್ಟಿದ್ದರು. ಗ್ರಾಮಸ್ಥರ ಮೇಲೆ ಹಿಂಸೆಗೆ ಇಳಿದಿರುವ ದೂರು ದಾಖಲಿಸಲಾಗಿದೆ ಎಂದು ಕೋಮ್ನಾ ಪೊಲೀಸ್ ಹೇಳಿದ್ದಾರೆ.

ಪೊಲೀಸರು ದೂರು ದಾಖಲಿಸಿದ್ದರೂ ಬಿಡದೆ, ಗ್ರಾಮದ ಮಹಿಳೆಯರು ಮದ್ಯದಂಗಡಿ ಸ್ಥಳಾಂತರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಮದ್ಯದಂಗಡಿ ಸ್ಥಳಾಂತರಗೊಂಡ ಮೇಲೆ ಅಪರಾಧ ಹೆಚ್ಚಾಗುವ ಭೀತಿ ಮಹಿಳೆಯರಲ್ಲಿ ಮೂಡಿದೆ. ಪ್ರಾಂತದಲ್ಲಿ ಬಹುತೇಕ ಮದ್ಯದಂಗಡಿಗಳನ್ನು ಹೆದ್ದಾರಿಗಳ ಪಕ್ಕದಲ್ಲೇ ಇರುವ ಗ್ರಾಮಗಳಿಗೆ ಸ್ಥಳಾಂತರಿಸಲಾಗಿರುವ ಕಾರಣದಿಂದ ಗ್ರಾಮದಲ್ಲಿ ಹೊರಗಿನವರ ಪ್ರವೇಶವಾಗಿ ಅಪರಾಧ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಹಿಳೆಯರು ಭಯಪಡುತ್ತಿದ್ದಾರೆ.

ಈಗಾಗಲೇ ಕೌಟುಂಬಿಕ ಹಿಂಸೆಯಿಂದ ನಲುಗಿರುವ ಕುಟುಂಬ ಮದ್ಯದಂಗಡಿಯಿಂದ ಇನ್ನಷ್ಟು ವಿಶಮಿಸಲಿದೆ ಎನ್ನುವ ಮಹಿಳೆಯರ ಪ್ರಕಾರ ಜಿಲ್ಲಾಡಳಿತ ತಮ್ಮ ಬೇಡಿಕೆಯನ್ನು ಮನ್ನಿಸದೆ ಇರುವ ಕಾರಣ ಪ್ರತಿಭಟನೆಗೆ ಇಳಿದಿದ್ದಾರೆ.

ಗ್ರಾಮಸ್ಥರು ಮದ್ಯದಂಗಡಿ ಸ್ಥಾಪನೆಗೆ ವಿರೋಧಿಸಿದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಹಳೇ ಅಂಗಡಿಗಳಲ್ಲೇ ಹೆಚ್ಚಿನ ಬೆಲೆಗೆ ಮದ್ಯ ಮಾರುತ್ತಿದ್ದಾರೆ. ಮಾರ್ಚ್ 31ರ ನಂತರವೂ ಹಳೇ ಮದ್ಯದಂಗಡಿಗಳಲ್ಲಿ ಮುಕ್ತವಾಗಿ ಮದ್ಯ ಮಾರಾಟವಾಗುತ್ತಿತ್ತು. ಪಶ್ಚಿಮ ಒಡಿಶಾ ಶಿಕ್ಷಣ ಪ್ರಾಂತವೆಂದು ಪ್ರಸಿದ್ಧವಾಗಿದ್ದರೂ ಮದ್ಯಸೇವನೆಯಲ್ಲಿ ಹಿಂದೆ ಬಿದ್ದಿಲ್ಲ. ಸಂಬಲ್ಪುರ ಜಿಲ್ಲೆಯ ಹೆದ್ದಾರಿಯಲ್ಲಿ ಸುಮಾರು 47 ಮದ್ಯದಂಗಡಿಗಳಿವೆ. ಗ್ರಾಮಸ್ಥರ ವಿರೋಧದಿಂದ ಪೂರ್ಣವಾಗಿ ಮದ್ಯದಂಗಡಿ ಮುಚ್ಚಿದಲ್ಲಿ ರಾಜ್ಯ ಬೊಕ್ಕಸಕ್ಕೆ ನಷ್ಟವಾಗಲಿದೆ. ಆದರೆ ಗ್ರಾಮಸ್ಥರ ತೀವ್ರ ವಿರೋಧದಿಂದ ಆಡಳಿತ ಅಡಕತ್ತರಿಯಲ್ಲಿ ಬಿದ್ದಿದೆ.