`ಮಹಿಳೆಯರಿಗೆ ಕಾಂಗ್ರೆಸ್ಸಿನಲ್ಲಿ ಪ್ರಾಮುಖ್ಯತೆ ನೀಡುತ್ತಿಲ್ಲ’

ಬೆಂಗಳೂರು : 2018ರಲ್ಲಿ ರಾಜ್ಯ ಅಸೆಂಬ್ಲಿಗೆ ನಡೆಯಲಿರುವ ಚುನಾವಣೆ ವಿಷಯದಲ್ಲಿ ಚರ್ಚಿಸಲು ಸೋಮವಾರ ಕರೆಯಲಾಗಿದ್ದ ಕಾಂಗ್ರೆಸ್ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಪಕ್ಷದ ನಾಯಕರಿಗೆ ಮಾತ್ರ ಮಣೆ ಹಾಕಿದ್ದರು ಎಂಬ ಧ್ವನಿಯೊಂದು ಕೇಳಿಬಂದಿದೆ. ಕೆಲವೇ ಕೆಲವು ಮಹಿಳಾ ನಾಯಕಿಯರಿಗೆ ಆಹ್ವಾನ ನೀಡಲಾಗಿತ್ತು.

“ಇದು ನಿಜವಾಗಿಯೂ ನೋವಿನ ಸಂಗತಿ. ಪಕ್ಷದಲ್ಲಿ ಮಹಿಳೆಯರನ್ನು ಎರಡನೇ ದರ್ಜೆಯವರಂತೆ ಕಾಣಲಾಗುತ್ತಿದೆ. ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ನಮ್ಮ ನಾಯಕರು ಮಹಿಳೆಯರಿಗೆ ಇಂತಹ ಸಭೆಗಳಲ್ಲಿ ಮಹತ್ವ ನೀಡುತ್ತಿಲ್ಲ” ಎಂದು ಮಹಿಳಾ ಕಾಂಗ್ರೆಸ್ ನಾಯಕಿಯೊಬ್ಬರು ಟೀಕಿಸಿದರು.

“ಇದೇನೂ ಪ್ರಥಮ ಎಂದಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳಲಾರಂಭಿಸಿದ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಅನೇಕ ಸಭೆಗಳು ನಡೆದಿದ್ದರೂ, ಅದರಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿಲ್ಲ” ಎಂದವರು ಆರೋಪಿಸಿದರು.

“ಹೆಚ್ಚಿನ ಕಾಂಗ್ರೆಸ್ ಸಭೆಗಳಿಗೆ ರಾಜ್ಯದ ಹಿರಿಯ ನಾಯಕಿಯರಾದ ಮೋಟಮ್ಮ, ಮಾಜಿ ಸಚಿವೆ ರಾಣಿ ಸತೀಶ್ ಮತ್ತು ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಗೆ ಆಹ್ವಾನ ನೀಡಿಲ್ಲ” ಎಂದವರು ಹೇಳಿದರು