ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರು ಧಾನ್ಯ ರುಬ್ಬಲಿ

ರಾಜಸ್ಥಾನ ಬಿಜೆಪಿ ಸರ್ಕಾರದ ಇರಾದೆ

ಮಹಿಳೆಯರು ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮನೆಯಲ್ಲಿ ಕಸ ಗುಡಿಸಲು ಆರಂಭಿಸಬೇಕು ಮತ್ತು ರುಬ್ಬುಗುಂಡು ಉಪಯೋಗಿಸಬೇಕು ಎಂದು ಹೇಳುವ ಮೂಲಕ ರಾಜಸ್ಥಾನದ ಸರ್ಕಾರಿ ಪತ್ರಿಕೆ ಹೊಸ ವಿವಾದವನ್ನು ಹುಟ್ಟುಹಾಕಿದೆ.

ಶಿವಾರಾ ಎಂಬ ಹೆಸರಿನ ಸರ್ಕಾರಿ ಮಾಸಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿದ್ದು, ಹಲವಾರು ಮಹಿಳಾ ಸಂಘಟನೆಗಳು ಮತ್ತು ಕಾರ್ಯಕರ್ತರ ಖಂಡನೆಗೆ ಗುರಿಯಾಗಿದೆ. 52 ಪುಟಗಳ ನವಂಬರ್ ಸಂಚಿಕೆಯಲ್ಲಿ ಶಿಕ್ಷಕರನ್ನು ಉದ್ದೇಶಿಸಿಯೇ ಲೇಖನಗಳನ್ನು ಪ್ರಕಟಿಸಲಾಗಿದ್ದು, ಸ್ವಾಸ್ಥ್ಯ ಕಾಪಾಡಲು ಸರಳ ಉಪಾಯಗಳು ಎಂಬ ಲೇಖನದಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ.

ಮಹಿಳೆಯರು ಆರೋಗ್ಯ ಕರವಾಗಿರಲು ಮಜ್ಜಿಗೆಯನ್ನು ಕಡಿಯುವುದು, ನೀರಿನ ಕೊಡ ಹೊರುವುದು, ಓಡುವುದು, ಯೋಗ ಮಾಡುವುದು ಅವಶ್ಯ ಎಂದೂ ಹೇಳಲಾಗಿದೆ.

ಮುಂಜಾನೆಯ ವಾಕಿಂಗ್ ಮತ್ತಿತರ ಕಸರತ್ತುಗಳ ಹೊರತಾಗಿ ಮಹಿಳೆಯರು ದಿನನಿತ್ಯದ ಮನೆಗೆಲಸದ ಮೂಲಕವೂ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳುವ ಲೇಖಕರು, ಮಹಿಳೆಯರು ಮದ್ಯಪಾನ ಮತ್ತು ಪೆಪ್ಸಿ, ಕೋಲಾ ಮುಂತಾದ ಪಾನೀಯಗಳನ್ನು ವರ್ಜಿಸುವಂತೆ ಹೇಳಿದ್ದಾರೆ.

ಮಹಿಳೆಯರ ವಿಮೋಚನೆಯ ಸಾಧನ ಎನ್ನಲಾಗುವ ಶಿಕ್ಷಣದ ಮೂಲಕವೇ ಇಂತಹ ಪ್ರಾಚೀನ ಆಲೊಚನೆಗಳನ್ನು ಪುನಃ ಪ್ರಚಾರ ಮಾಡುವುದು ಅಕ್ಷಮ್ಯ ಎಂದು ಪಿಯುಸಿಎಲ್ ಹೇಳಿದೆ. ಆದರೆ ರಾಜಸ್ಥಾನ ಸರ್ಕಾರ ಈ ರೀತಿಯ ನಿಲುವು ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಮಾಂಸಾಹಾರದಿಂದ ದೇಹಕ್ಕೆ ತೊಂದರೆಯಾಗುತ್ತದೆ ಎಂದೂ ದೈಹಿಕ ಆರೋಗ್ಯದ ಪುಸ್ತಕದಲ್ಲಿ ಹೇಳಲಾಗಿದೆ. ಊಟಕ್ಕೆ ಮುನ್ನ ಮಂತ್ರ ಹೇಳುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದೂ ಪಠ್ಯಪುಸ್ತಕದಲ್ಲಿ ಹೇಳಲಾಗಿದೆ.