ರಾಜ್ಯದಲ್ಲಿ ಮಹಿಳೆಯರ, ಮಕ್ಕಳ ಕಳ್ಳ ಸಾಗಾಟ ಜಾಲ ಸಕ್ರಿಯೆ : ಶಾಸಕ ಸುನಿಲ್

ಬೆಳಗಾವಿ : “ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳ ಹಾಗೂ ಮಹಿಳೆಯರ ಕಳ್ಳಸಾಗಾಟ ಪ್ರಕರಣಗಳು ಕಳವಳಕಾರಿ. ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಜಾಲ ಸಕ್ರಿಯವಾಗಿದ್ದರೂ ರಾಜ್ಯ ಸರಕಾರ ಈ ಜಾಲವನ್ನು ಬೇಧಿಸಿ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತಿಲ್ಲ”ವೆಂದು ಕಾರ್ಕಳ ಬಿಜೆಪಿ ಶಾಸಕ ಸುನಿಲಕುಮಾರ್ ವಿಧಾನಸಭೆಯಲ್ಲಿ ದೂರಿದ್ದಾರೆ.

“30,000ಕ್ಕೂ ಅಧಿಕ ಮಕ್ಕಳನ್ನು ಅಮೆರಿಕಾಗೆ ಕಳ್ಳಸಾಗಣೆ ಮಾಡುವ ಯತ್ನ ಮಾಡಲಾಗಿದೆ” ಎಂದವರು ಆರೋಪಿಸಿದರು. ಗೃಹ ಸಚಿವರ ಹೇಳಿಕೆಯನ್ನು ನಿರಾಕರಿಸಿದ ಅವರು ರಾಜ್ಯ ಮಾನವ ಕಳ್ಳಸಾಗಾಟ ಪ್ರಕರಣಗಳÀಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದರು.

ಸರಕಾರವು ಮಾನವ ಕಳ್ಳಸಾಗಾಟ ತಡೆ ಘಟಕಗಳನ್ನು ಸ್ಥಾಪಿಸಿದ್ದು ಇವುಗಳಿಗೆ ದಕ್ಷಿಣ ಕನ್ನಡ, ಬಿಜಾಪುರ, ದಾವಣಗೆರೆ, ಬೆಂಗಳೂರು ನಗರ, ಹುಬ್ಬಳ್ಳಿ- ಧಾರವಾಡ, ಮೈಸೂರು, ಬೆಳಗಾವಿ, ಕಲಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಶಾಸಕರ ದೂರಿಗೆ ತಮ್ಮ ಪ್ರತಿಕ್ರಿಯೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ  ಹೇಳಿದರು.

“ನಲ್ವತ್ತು ಪೊಲೀಸ್ ಠಾಣಾ ವ್ಯಾಪ್ತಿಗಳ್ಲಿ ವಿಶೇಷ ಕಾರ್ಯಪಡೆಗಳನ್ನು ರಚಿಸಲಾಗಿದ್ದು 2014 ಹಾಗೂ ಸೆಪ್ಟೆಂಬರ್ 2016ರ ತನಕ ದಾಖಲಾದ ಎಲ್ಲಾ ಪ್ರಕರಣಗಳನ್ನು ಪರಿಹರಿಸಲಾಗಿದೆ. ಅಕ್ಟೋಬರ್ 2016 ರ ತನಕ 377 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದರು.