ಮಾಂಗಲ್ಯ ಸರ ಅಪಹರಣ

ಸಾಂದರ್ಭಿಕ ಚಿತ್ರ

ಬಂಟ್ವಾಳ : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಕೈತ್ರೋಡಿ ನಿವಾಸಿಯೊಬ್ಬಳ ಮಾಂಗಲ್ಯ ಸರವನ್ನು ಮಂಗಳವಾರ ಇಬ್ಬರು ಅಪರಿಚಿತ ಯುವಕರು ದಾರಿ ಕೇಳುವ ನೆಪದಲ್ಲಿ ಅಪಹರಿಸಿದ್ದಾರೆ. ನೇತ್ರಾವತಿ ಅವರು ಸಿದ್ದಕಟ್ಟೆಗೆ ಹೋಗಿ ರಾಯಿಯಲ್ಲಿ ಬಸ್ಸಿನಿಂದಿಳಿದು ಮನೆ ಕಡೆ ನಡೆದುಕೊಂಡು ಬರುತ್ತಿದ್ದಾಗ ಸಿದ್ದಕಟ್ಟೆ ಕಡೆಯಿಂದ ಇಬ್ಬರು ಯುವಕರು ಬಿಳಿ ಬಣ್ಣದ ಜುಪಿಟರ್ ದ್ವಿಚಕ್ರ ವಾಹನದಲ್ಲಿ ದಾರಿ ಕೇಳುವ ನೆಪದಲ್ಲಿ ಬಂದು ಅವರ ಕುತ್ತಿಗೆಯಲ್ಲಿದ್ದ 4 ಪವನ್ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಸಿದ್ದಕಟ್ಟೆ ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಪರಿಸರದ ಸೀಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.