ಮಗುವಿನ ಸರಕದ್ದ ಕಳ್ಳಿ ಸೆರೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮದುವೆ ಸಭಾಂಗಣಕ್ಕೆ ಬಂದಿದ್ದ ಮಹಿಳೆಯೊಬ್ಬಳು ಪುಟ್ಟ ಮಗುವಿನ ಸರವನ್ನು ಕದಿಯುತ್ತಿದ್ದ ಸಂದರ್ಭ ಸಾರ್ವಜನಿಕರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ತಿಬ್ಬಪದವಿನಲ್ಲಿ ನಡೆಯುತ್ತಿದ್ದ ಮದುವೆಗೆ ಬಂದಿದ್ದ ಮಹಿಳೆ ಸರಗಳವು ಮಾಡುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಈಕೆಯನ್ನು ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದೀಗ ಪೊಲೀಸರು ಉಳ್ಳಾಲ ಮೂಲದ 45ರ ಹರೆಯದ ಮುಸ್ಲಿಂ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈಕೆ ಮದುವೆ ಮನೆಯಲ್ಲಿ ಕಳವು ಮಾಡಿದ ಚಿನ್ನದ ಮೂರು ಸರಗಳು ಹಾಗೂ ನಗದು ಹಣ ಪತ್ತೆಯಾಗಿದ್ದು, ಮದುವೆ ಮನೆಯಲ್ಲಿ ನಾನು ಈ ಕಳವು ಕೃತ್ಯ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೆ ಈ ಹಿಂದೆ ಕೂಡಾ ತಾನು ಕೆಲವು ಮದುವೆ ಸಮಾರಂಭಗಳಿಗೆ ತೆರಳಿ ಅಲ್ಲಿ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈಕೆ ವಿರುದ್ಧ ಈಗಾಗಲೇ ಸರಗಳವು ಪ್ರಕರಣಗಳು ಉಳ್ಳಾಲ ಮತ್ತು ಕೊಣಾಜೆ ಠಾಣೆಯಲ್ಲಿ ದಾಖಲಾಗಿವೆ.

ಭಾನುವಾರ ಕೊಣಾಜೆ ತಿಬ್ಲಪದವು ಸಭಾಂಗಣದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಆಗಮಿಸಿದ ಈಕೆ ಪುಟ್ಟ ಮಗುವಿನ ಸರವನ್ನು ಕಳವು ಮಾಡುತ್ತಿರುವುದನ್ನು ಕಂಡ ಕುಟುಂಬಿಕರು ಕೂಡಲೇ ಎಲ್ಲರಿಗೂ ತಿಳಿಸಿದ್ದು, ಆಕೆಯನ್ನು ಸೆರೆಹಿಡಿದು ಚೆನ್ನಾಗಿ ಬಾರಿಸಿ ಬಳಿಕ ಕೊಣಾಜೆ ಠಾಣಾ ಪೊಲೀಸರಿಗೊಪ್ಪಿಸಿದ್ದಾರೆ.

ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಈಕೆ ತನ್ನ ಈ ಹಿಂದಿನ ಪ್ರಕರಣಗಳ ಬಗ್ಗೆಯೂ ಬಾಯಿಬಿಟ್ಟಿದ್ದಾಳೆ. ಈಕೆಯ ಜೊತೆಗೆ ದೊಡ್ಡ ತಂಡವೇ ಇರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಈಕೆಯನ್ನು ಹಿಡಿದುಕೊಟ್ಟ ಸಾರ್ವಜನಿಕರು ಈಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಾಗೂ ಈಕೆಯ ಜೊತೆಗೆ ಇರುವವರನ್ನು ಪತ್ತೆ ಹಚ್ಚಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.