ಪಿಣರಾಯಿ ವಿರುದ್ಧ ಹರಿಹಾಯ್ದ ಮಗನ ಕಳೆದುಕೊಂಡ ತಾಯಿ

=

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಲೇಜಿನ ಆಡಳಿತ ಮಂಡಳಿ ಕಿರುಕುಳದಿಂದ ಪಂಪಾಡಿ ನೆಹರೂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಜಿಷ್ಣು ಪ್ರಣೋಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಾಯಿ ಮಹಿಜಾ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.

ನೆಡುಪರಂಬದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಷ್ಣು ತಾಯಿ ಮಹಿಜಾ, “ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನನ್ನ ಮನೆಗೆ ಭೇಟಿ ನೀಡುವ ಅಗತ್ಯವಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲ ಆರೋಪಿಗಳ ಬಂಧನವಾಗುವವರೆಗೂ ಸೀಎಂ ತನ್ನ ಮನೆಗೆ ಆಗಮಿಸಲೇಬಾರದು ಎಂದು ಆಗ್ರಹಿಸಿದರು.

“ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಲು ವಿಜಯನ್ ಹಿಂದೇಟು ಹಾಕುತ್ತಿದ್ದಾರೆ. ಪುತ್ರ ಜೀವ ಕಳೆದುಕೊಂಡ 50 ದಿನಗಳ ನಂತರವೂ ಇನ್ನೂ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಲು ವಿಫಲರಾಗಿದ್ದಾರೆ. ಪ್ರಕರಣದಲ್ಲಿ ಕಾಲೇಜಿನ ಅಧ್ಯಕ್ಷ ಪಿ ಕೃಷ್ಣದಾಸ್ ಅವರೇ ಆರೋಪಿಯಾಗಿರುವ ಸಾಕ್ಷಾಧಾರಗಳಿದ್ದರೂ ಅವರನ್ನು ಪೊಲೀಸರು ಇನ್ನೂ ಅರೆಸ್ಟ್ ಮಾಡಿಲ್ಲ. ಇದೆಲ್ಲವೂ ಆರೋಪಿಗಳನ್ನು ರಕ್ಷಿಸುವ ಷಡ್ಯಂತ್ರ” ಎಂದು ದೂರಿದರು.

ಕುಟುಂಬಕ್ಕೆ ಸಾಂತ್ವನ ನೀಡುವ ನಿಟ್ಟಿನಲ್ಲಿ ತಾನು ಜಿಷ್ಣು ನಿವಾಸಕ್ಕೆ ಭೇಟಿ ನೀಡುವುದಾಗಿ ಪಿಣರಾಯಿ ಹೇಳಿಕೆ ನೀಡಿದ್ದರು. ಫೆ 28ರ ಮುನ್ನ ಎಲ್ಲಾ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ತಾನು ಸಚಿವಾಲಯದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಮಾಡುವ ಬೆದರಿಕೆಯನ್ನು ಮಹಿಜಾ ಹಾಕಿದರು.

ಮಹಿಜಾ ಅಂತರ್ಜಾಲ ತಾಣ ಫೇಸ್ಬುಕ್ಕಿನಲ್ಲೂ ತನ್ನ ಪುತ್ರನ ಸಾವಿನ ಕುರಿತು ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ನಡುವೆ ಸಿಪಿಎಂ ಧುರೀಣ ವಿ ಎಸ್ ಅಚ್ಚುತಾನಂದನ್ ಅವರು ಕೂಡಾ  ಜಿಷ್ಣು ಅವರ ಸಾವಿನ ಆರೋಪಿಗಳನ್ನು ಬಂಧಿಸಲು ಮೀನಮೇಷ ಎಣಿಸುತ್ತಿರುವ ಎಲ್ ಡಿ ಎಫ್ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇರಳ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಅಚ್ಚುತಾನಂದನ್, ಜಿಷ್ಣು ಮನೆಗೆ ಭೇಟಿ ನೀಡಿದ ವೇಳೆ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಕಾಲೇಜಿನ ಹಾಸ್ಟೆಲ್ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಜಿಷ್ಣು ಮೃತದೇಹ ಪತ್ತೆಯಾಗಿತ್ತು.