ಆನೆಗುಡ್ಡೆ ದೇಗುಲದಲ್ಲಿ ಮಹಿಳೆ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಕಳವು

ಸಾಂದರ್ಭಿಕ ಚಿತ್ರ

ಕುಂದಾಪುರ : ಇಲ್ಲಿನ ಇತಿಹಾಸ ಪ್ರಸಿದ್ಧ ಆನೆಗುಡ್ಡೆ  ವಿನಾಯಕ ದೇವಸ್ಥಾನಕ್ಕೆ ಮಧ್ಯಾಹ್ನದ ಮಹಾಪೂಜೆಯ ಸಂದರ್ಭದಲ್ಲಿ ಆಗಮಿಸಿದ ಮಹಿಳೆಯೋರ್ವರ  ಬ್ಯಾಗಿನಲ್ಲಿದ್ದ  ಸುಮಾರು 80 ಗ್ರಾಂ ತೂಕದ ಚಿನ್ನಾಭರಣಗಳನ್ನು  ಅಪರಿಚಿತ ಮಹಿಳೆಯರು ಎಗರಿಸಿ ವಾಹನದಲ್ಲಿ  ಪರಾರಿಯಾಗಿದ್ದಾರೆ.

ಬೆಂಗಳೂರಿನ ಜ್ಯೋತಿ ಚಿನ್ನಾಭರಣವನ್ನು ಕಳೆದುಕೊಂಡವರು. ಬುಧವಾರ ಕೊಲ್ಲೂರಿನಲ್ಲಿ  ನಡೆದ ಮದುವೆಗೆ ಆಗಮಿಸಿದ್ದ ಅವರು, ಮದುವೆ ಕಾರ್ಯ ಮುಗಿಸಿ ಕುಂದಾಪುರದ ಉಳ್ತೂರಿನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಗುರುವಾರ ಆನೆಗುಡ್ಡೆ ದೇವಸ್ಥಾನಕ್ಕೆ ಬಂದಿದ್ದು, ಪೂಜೆಯ ನಂತರ ಆರತಿ ತೆಗೆದುಕೊಳ್ಳುವಾಗ ನಾಲ್ವರು ಮಹಿಳೆಯರನ್ನು ಒಳಗೊಂಡ ಅಪರಿಚಿತರು ಬ್ಯಾಗಿನ ಜಿಪ್ Éಗೆದು ಚಿನ್ನಾಭರಣಗಳನ್ನು ಅಪಹರಿಸಿದ್ದಾರೆ. ಬ್ಯಾಗಿನಲ್ಲಿ ಎರಡು ಚಿನ್ನದ ಸರಗಳು, ಒಂದು ನಕ್ಲೇಸ್, ಒಂದು ಬಳೆಯನ್ನೊಳಗೊಂಡಂತೆ ಸುಮಾರು 80 ಗ್ರಾಂ ತೂಕದ ಚಿನ್ನಾಭರಣಗಳಿದ್ದವು ಎಂದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜ್ಯೋತಿ ಅವರು ಕುಂದಾಪುರ  ಠಾಣೆಗೆ ದೂರು ನೀಡಿದ್ದು, ದೇಗುಲದ ಸೀಸೀಟೀವಿ  ಫೂಟೇಜನ್ನು ಪೊಲೀಸರು ವೀಕ್ಷಿಸಿದ್ದು, ಆರೋಪಿಗಳು ಪರಾರಿಯಾದ ವಾಹನದ ನಂಬರ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇದೀಗ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.