ನೆಲ್ಯಾಡಿ ಮಹಿಳೆ ಕತ್ತಿನಿಂದ ಚಿನ್ನಾಭರಣ ಕಸಿದು ಪರಾರಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ನೆಲ್ಯಾಡಿ ಸಮೀಪದ ಕೊಲ್ಯೊಟ್ಟು ಎಂಬಲ್ಲಿ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಮಾಂಗಲ್ಯ ಸರ ಹಾಗೂ ಇನ್ನೊಂದು ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಸರಗಳ್ಳರು ಕಸಿದು  ಪರಾರಿಯಾಗಿದ್ದಾರೆ.

ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟು-ಪರಾರಿ  ನಿವಾಸಿ ಜಿನ್ನಪ್ಪ ಶೆಟ್ಟಿ ಎಂಬವರ ಪತ್ನಿ ಸೇಸಮ್ಮ 56 ಎಂಬವರು ಕಾರ್ಯ ನಿಮಿತ್ತ ಹೋಗಿದ್ದವರು  ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ಜೀಪಿನಲ್ಲಿ ಬಂದು ತಮ್ಮ ಮನೆಯ ಕಡೆಗೆ ನಡೆದುಕೊಂಡು  ಹೋಗುತ್ತಿದ್ದಾಗ ಈ ಘಟನೆ ನಡೆದಿದಿದೆ.

ಕಪ್ಪು ಬಣ್ಣದ ಬೈಕಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಸೇಸಮ್ಮರವರ ಕುತ್ತಿಗೆಗೆ ಕೈಹಾಕಿ ಅಂದಾಜು 7.50 ಪವನ್ ತೂಕದ ಕರಿಮಣಿಸರ ಹಾಗೂ ಇನ್ನೊಂದು ಚಿನ್ನದ ಸರವನ್ನು ಸೆಳೆದುಕೊಂಡು ನೆಲ್ಯಾಡಿ ಭಾಗಕ್ಕೆ ಪರಾರಿಯಾದರು.

ಕಪ್ಪು ಬಣ್ಣದ ಬೈಕಿನಲ್ಲಿ 2 ಜನ ಯುವಕರು ಇದ್ದು ಕೆಂಪು ಬಣ್ಣದ ಶರ್ಟ್ ಧರಿಸಿದ್ದಾರೆನ್ನಲಾಗುತ್ತಿದ್ದು ಒಬ್ಬ ಉದ್ದ ತಲೆಗೂದಲು ಬಿಟ್ಟ ವ್ಯಕ್ತಿಯಾಗಿದ್ದನೆಂದು ಸೇಸಮ್ಮ ರವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುತ್ತಿಗೆಯಿಂದ ಚೈನ್ ಎಳೆದ ರಭಸಕ್ಕೆ ಕುತ್ತಿಗೆಗೆ ಗಾಯವಾಗಿದ್ದು ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸ್ ಹಾಗೂ ನೆಲ್ಯಾಡಿ ಉಪಠಾಣಾ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿದರು.