ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಅತ್ಯಾಚಾರ

ದರ್ಬಾಂಗ್ : ದರ್ಬಾಂಗ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅನುಮತಿಯಿಲ್ಲದೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮೊನ್ನೆ ಸಂಜೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ.

ಆಸ್ಪತ್ರೆಯ ವಾರ್ಡಿನಲ್ಲಿ ರೋಗಿಗಳ ಗಾಯಗಳಿಗೆ ಬ್ಯಾಂಡೇಜು ಮಾಡುತ್ತಿದ್ದ ಬಿಪಿನ್ ಕುಮಾರ್ (25) ಎಂಬವ ಮೊನ್ನೆ ಸಂಜೆ ಆಸ್ಪತ್ರೆಗೆ ಹೊಂದಿಕೊಂಡಿರುವ ರೂಮೊಂದರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಆಸ್ಪತ್ರೆಯಿಂದ ಓಡಲು ಪ್ರಯತ್ನಿಸಿದಾಗ ಸೆಕ್ಯೂರಿಟಿ ಸಿಬ್ಬಂದಿ ಹಿಡಿದಿದ್ದಾರೆ.

ಡಿಸೆಂಬರ್ 23ರಂದು ಕಾಲು ಮುರಿದ್ದುಕೊಂಡಿದ್ದ ಮಹಿಳೆಯ ಮಗ ಆಸ್ಪತ್ರೆಗೆ ದಾಖಲಾಗಿದ್ದು, ಆತನಿಗೆ ಸಹಾಯ ಮಾಡುವುದಾಗಿ ಹೇಳಿದ ಬಿಪಿನ್, ಮಹಿಳೆಗೆ ಮೋಸ ಮಾಡಿದ್ದಾನೆ.

ದರ್ಬಾಂಗ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ದರ್ಬಾಂಗ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ದಿಲ್ನವಾಝ್ ಅಹ್ಮದ್ ತಿಳಿಸಿದರು.

ಆಸ್ಪತ್ರೆಗೆ ಹೊಂದಿಕೊಂಡಿರುವ ಅಲ್ಲಲ್ಪಟ್ಟಿಯ ಮನೆಯೊಂದರಲ್ಲಿ ಬಿಪಿನ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ನೊಂದ ಮಹಿಳೆ ದೂರಿದ್ದಾರೆ. “ರಾತ್ರಿ ವೇಳೆ ಆಸ್ಪತ್ರೆ ವಾರ್ಡಿನಲ್ಲಿ ಇರದಂತೆ ಅಧಿಕಾರಿಗಳು ಎಚ್ಚರಿಸಿದ್ದ ಕಾರಣ ನಾನು ಹೊರಗಡೆ ಹೋಗಿದ್ದೆ” ಎಂದಾಕೆ ತಿಳಿಸಿದ್ದಾಳೆ. ಈ ಆಸ್ಪತ್ರೆಯಲ್ಲಿ ಇನ್ನೂ ಕೆಲವರು ಅನಧಿಕೃತವಾಗಿ ಕೆಲಸ ಮಾಡುತ್ತಿದ್ದಾರೆಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಇಲ್ಲಿನ ವೈಶಾಲಿಯಲ್ಲಿರುವ ಸರ್ಕಾರಿ ಸಂಚಾಲಿತ ಅಂಬೇಡ್ಕರ್ ವಸತಿಗೃಹದಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ದುಷ್ಕರ್ಮಿಗಳು ಅತ್ಯಾಚಾರಗೈದ ಬಳಿಕ ಕೊಲೆ ಮಾಡಿದ್ದಾರೆ.