ಪತಿ ಕೊಲೆ ಶಂಕಿಸಿ ಪತ್ನಿ ದೂರು

ಮಲಗಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ವ್ಯಕ್ತಿಯೊಬ್ಬರ ಶವ ಮನೆಯಲ್ಲಿ ಮಲಗಿದ ರೀತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಕೊಯ್ಯೂರು ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಇದೀಗ ಮೃತರ ಪತ್ನಿ, ಮಕ್ಕಳು ಕೊಲೆ ಶಂಕೆ ವ್ಯಕ್ತಪಡಿಸಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದಾರೆ.

ಕೊಯ್ಯೂರು ಗ್ರಾಮದ ಬಜಲ ಸನಿಹದ ಉಮಿಯ ನಿವಾಸಿ ನೀಲಯ್ಯ ಯಾನೆ ನಾರ್ಣಪ್ಪ ಗೌಡ (50) ಎಂಬವರ ಶವ ಜ 8ರಂದು ಮನೆಯಲ್ಲಿ ಚಾಪೆಯಲ್ಲಿ ಮಲಗಿಸಿದ ರೀತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತರ ಪತ್ನಿ ವಾರಿಜ ಪತಿಯ ಸಾವಿನ ಬಗ್ಗೆ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

25 ವರ್ಷಗಳ ಹಿಂದೆ ನೀಲಯ್ಯ ಹಾಗೂ ವಾರಿಜಾ ಮಧ್ಯೆ ಮದುವೆ ನಡೆದಿದ್ದು, ಇವರಿಗೆ ಇಬ್ಬರು ಗಂಡು ಸೇರಿ ಮೂವರು ಮಕ್ಕಳು. ನೀಲಯ್ಯ ಮತ್ತು ವಾರಿಜಾ ದಂಪತಿಯ ಮಕ್ಕಳ ಪೈಕಿ ಹಿರಿಯ ಮಗ ದೇಜಪ್ಪ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಉದ್ಯೋಗದಲ್ಲಿದ್ದು, ಮಗಳು ದುರ್ಗಾವತಿಗೆ ಎರಡು ವರ್ಷದ ಹಿಂದೆಯಷ್ಟೇ ಮದುವೆಯಾಗಿದೆ. ಕೊನೆಯ ಮಗ ದಿನೇಶ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

ನೀಲಯ್ಯ ಮತ್ತು ಒಡಹುಟ್ಟಿದ ಸಹೋದರರ ಮಧ್ಯೆ ಹಲವು ವರ್ಷಗಳಿಂದ ಜಾಗದ ತಕರಾರಿಗೆ ಸಂಬಂಧಿಸಿ ತೀವ್ರ ಕೌಟುಂಬಿಕ ಕಲಹವಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಮತ್ತು ಹೃದ್ರೋಗಕ್ಕೆ ಚಿಕಿತ್ಸೆ ಪಡೆಯುವುದಕ್ಕಾಗಿ 18 ವರ್ಷಗಳಿಂದ ನೀಲಯ್ಯ ಅವರ ಪತ್ನಿ ವಾರಿಜಾ ಮಕ್ಕಳೊಂದಿಗೆ ಬಂದಾರು ಗ್ರಾಮದಲ್ಲಿರುವ ತವರು ಮನೆಯವರ ಆಶ್ರಯದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕೊಡಿಸಿದ್ದರು. ಪತ್ನಿಯ ತವರು ಮನೆಯಾದ ನಾವುಳೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಪತಿ ನೀಲಯ್ಯ ಬಂದು ಪತ್ನಿ ಮಕ್ಕಳನ್ನು ಕಂಡು ಹೋಗುತ್ತಿದ್ದರು. ತಂದೆಯನ್ನು ಕಾಣಲು ಬರುತ್ತಿದ್ದ ಮಕ್ಕಳು ಜಾಗದಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಸಹಾಯ ಮಾಡಿ ವಾಪಾಸು ಹೋಗುತ್ತಿದ್ದರು. ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗುಡ್ಡದಲ್ಲಿ ಕೊಲೆಗೈದು ಮನೆಯಲ್ಲಿ ಮಲಗಿಸಿದರೇ ?

ಮನೆಯೊಳಗೆ ಚಾಪೆಯಲ್ಲಿ ಮಲಗಿಸಿದ ರೀತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ನಾರ್ಣಪ್ಪ ಅವರ ಸಾವಿನ ಬಗ್ಗೆ ಪತ್ನಿ, ಮಕ್ಕಳು ಮತ್ತು ಊರವರಲ್ಲಿ ಸಂಶಯ ಹುಟ್ಟಲು ಬಲವಾದ ಕಾರಣವಿದೆ. ಪತ್ನಿ ವಾರಿಜಾ ಮತ್ತು ಮಕ್ಕಳ ಪ್ರಕಾರ ಪ್ರತ್ಯೇಕ ಮನೆ ಕಟ್ಟಿಕೊಂಡು ಒಬ್ಬಂಟಿಯಾಗಿ ವಾಸಿಸುತ್ತಿದ್ದ ನಾರ್ಣಪ್ಪ ಗೌಡ ಆರೋಗ್ಯವಾಗಿಯೇ ಇದ್ದವರಾಗಿದ್ದು, ತಮ್ಮ ಜಾಗದಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದವರು. ಮನೆಯ ಸನಿಹದ ಗುಡ್ಡದಲ್ಲಿ ಸೊಪ್ಪು, ತರಗೆಲೆ ಸಂಗ್ರಹಿಸಲು ಹೋಗಿದ್ದು ಅರ್ಧ ಹೊರೆಯಷ್ಟು ತರಗೆಲೆ, ಸೊಪ್ಪಿನ ರಾಶಿ, ಕತ್ತಿ ಮತ್ತು ಚಪ್ಪಲಿ ಪತ್ತೆಯಾಗಿದ್ದು ಸಾವಿಗೂ ಮುನ್ನ ನಾರ್ಣಪ್ಪ ಗೌಡ ಸೊಪ್ಪಿನ ಕೆಲಸ ಮಾಡುತ್ತಿದ್ದರೆಂಬುದಕ್ಕೆ ಸಾಕ್ಷಿಯಾಗಿದೆ. ಹಾಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ

ಸೊಪ್ಪು, ಚಪ್ಪಲಿ, ಕತ್ತಿ ಅಲ್ಲೇ ಬಿಟ್ಟು ಮನೆಗೆ ಬಂದರೇ ? ಅಥವಾ ಕೆಲಸ ಮಾಡುತ್ತಿದ್ದ ವೇಳೆ ಗಂಭೀರ ಹಲ್ಲೆಗೈದ ಪರಿಣಾಮ ಮೃತಪಟ್ಟ ಬಳಿಕ ಶವವನ್ನು ಮನೆಗೆ ಹೊತ್ತು ತಂದು ಚಾಪೆ ಹಾಕಿ ಮಲಗಿಸಲಾಯಿತೇ ? ಎಂಬಿತರ ಪ್ರಶ್ನೆಗಳು ಹುಟ್ಟಿಕೊಂಡಿವೆ.

ನೀಲಯ್ಯ ಯಾನೆ ನಾರ್ಣಪ್ಪ ಗೌಡ ನಾಲ್ಕೈದು ದಿನಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆಯಿದ್ದು ಚಾಪೆಯಲ್ಲಿ ಮಲಗಿಸಿದ ರೀತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಈ ನಿಗೂಢ ಸಾವು ಕೊಲೆ ಎಂಬ ಬಲವಾದ ಶಂಕೆ ಕುಟುಂಬಸ್ಥರು ಮತ್ತು ಸ್ಥಳೀಯರಿಂದ ವ್ಯಕ್ತವಾಗುತ್ತಿದೆ.