ಮಕ್ಕಳಿಬ್ಬರ ಕೊಂದ ತಾಯಿ ನೇಣಿಗೆ

ಸಾಂದರ್ಭಿಕ ಚಿತ್ರ

ನಪ್ರವ

ಚಿಕ್ಕಮಗಳೂರು : ಪತ್ನಿ ಮನೆಯವರಿಂದ ಪತಿ ಪಡೆದಿದ್ದ 10,000 ರೂ ಸಾಲ ಹಿಂದಿರುಗಿಸಲು ವಿಳಂಬವಾದ ಕಾರಣ, ಕಳೆದ 15 ದಿನದಿಂದ ದಂಪತಿಯ ಮಧ್ಯೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತ ಮಹಿಳೆ ಮೊನ್ನೆ ತನ್ನಿಬ್ಬರು ಮಕ್ಕಳ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ವಿಲಕ್ಷಣ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಿಬೀರನಹಳ್ಳಿಯಲ್ಲಿ ನಡೆದಿದೆ.

ಪತಿ ಬಸವರಾಜ ಕೆಲವು ಸಮಯದ ಹಿಂದೆ ಪತ್ನಿ ಶೋಭಾಳ ಮನೆಯವರಿಂದ 10,000 ರೂ ಸಾಲ ಪಡೆದಿದ್ದ. ಈ ಹಣ ಮರು ಪಾವತಿಸಲು ಬಸವರಾಜನಿಂದ ಸಾಧ್ಯವಾಗಿಲ್ಲ. ಇದೇ ಕಾರಣಕ್ಕಾಗಿ ಅಳಿಯ ಮತ್ತು ಆತನ ಮನೆಯವರು ಪುತ್ರಿ ಶೋಭಾಗೆ ಕಿರುಕುಳ ನೀಡುತ್ತಿದ್ದು, ಶೋಭಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ತಾಯಿ ಆರೋಪಿಸಿ, ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಶೋಭಾಳ ಮನೆಯವರು ಸಾಲದ ಹಣ ಕೇಳಿದಾಗ ಮರುಪಾವತಿಸಲು ಬಸವರಾಜನಿಂದ ಸಾಧ್ಯವಾಗದೆ, ಸ್ವಲ್ಪ ಸಮಯ ನೀಡುವಂತೆ ಕೇಳಿಕೊಂಡಿದ್ದ. ಆದರೆ ಈ ವಿಷಯದಲ್ಲಿ ದಂಪತಿ ಕಳೆದ 15 ದಿನದಿಂದ ಆಗಾಗ್ಗೆ ಜಗಳ ನಡೆಯುತ್ತಿದ್ದು, ಬುಧವಾರವೂ ಜಗಳ ನಡೆಯಿತು. ನಂತರ ಬಸವರಾಜ ತನ್ನ ತಂದೆಯೊಂದಿಗೆ ಮನೆಯಿಂದ ಹೊರಗಡೆ ಹೋಗಿದ್ದ.

ಆ ವೇಳೆ ಮನೆಯಲ್ಲಿದ್ದ ಮಗ ಪ್ರದೀಪ (9) ಮತ್ತು ಪುತ್ರಿ ವಾಣಿ (4) ಅವರಿಗೆ ನೇಣು ಹಾಕಿ ಕೊಲೆಗೈದು, ಬಳಿಕ ಶೋಭಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಸವರಾಜ ಮನೆಗೆ ಬಂದಾಗಲೇ ಈ ಸಂಗತಿ ಬೆಳಕಿಗೆ ಬಂದಿದೆ. “ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಪಾಲಕರಿಗೆ ಒಪ್ಪಿಸಲಾಗಿದೆ. ಇದು ಆತ್ಮಹತ್ಯೆ ಪ್ರಕರಣವಾಗಿದ್ದು, ಇದರಲ್ಲಿ ಸಂಶಯಿಸಬಹುದಾದ ವಿಷಯವಿಲ್ಲ ಎಂದು ವೈದ್ಯರು ಹೇಳಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ತನಿಖೆ ನಡೆಯುತ್ತಿದೆ. ಬಸವರಾಜ ಮತ್ತು ಅವರ ಕುಟುಂಬ ಉತ್ತಮವಾಗಿತ್ತು ಎಂದಿರುವ ಗ್ರಾಮಸ್ಥರು, ದಂಪತಿ ಮೇಲೆ ಯಾವುದೇ ಸಂದೇಹ ವ್ಯಕ್ತಪಡಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

LEAVE A REPLY