ಮರ್ಕೋಡಿ ಹೊಳೆಯಲ್ಲಿ ಹೆಂಗಸಿನ ಶವ ಪತ್ತೆ

ಕಾಪು ಪೊಲೀಸರು ಶವ ಮಹಜರು ನಡೆಸಿದರು

ಆತ್ಮಹತ್ಯೆ ಶಂಕೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಾಪು ಸಮೀಪದ ಮರ್ಕೋಡಿ ಹೊಳೆಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿದ್ದು, ಈಕೆ ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ.

ಮೃತ ಮಹಿಳೆ ಮಡುಂಬು ನಿವಾಸಿ ವಸಂತಿ ಶ್ಯಾನುಭೋಗ್ (50). ಇವರು ಆರು ವರ್ಷದ ಹಿಂದೆ ತನ್ನ ಮನೆಯನ್ನು ಮಾರಿ ಮಂಗಳೂರಿನ ವಾಮಂಜೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವಿವಾಹಿತರಾಗಿದ್ದ ಇವರು, ಮಂಗಳವಾರ ಕಾಪುವಿಗೆ ತನ್ನ ಸಂಬಂಧಿಕರ ಮನೆಯಲ್ಲಿ ಶುಭಕಾರ್ಯ ನಿಮಿತ್ತ ಬಂದಿದ್ದರು. ಇದೀಗ ಬುಧವಾರ ಬೆಳಿಗ್ಗೆ ಮರ್ಕೋಡಿ ಕಟ್ಟದ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದ್ದು, ಮಾಹಿತಿ ತಿಳಿದ ಕಾಪು ವೃತ್ತನಿರೀಕ್ಷಕ ಹಾಲಮೂರ್ತಿ ರಾವ್, ಎಸೈ ಜಗದೀಶ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದರು. ಸಾರ್ವಜನಿಕರ ನೆರವಿನಿಂದ ಶವವನ್ನು ಮೇಲೆತ್ತಲಾಯಿತು. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.