ಮಹಿಳೆಯಿಂದ ಗಂಡನ ವಿರುದ್ಧ ಅತ್ಯಾಚಾರ ದೂರು

ಸಾಂದರ್ಭಿಕ ಚಿತ್ರ

ಬೆಂಗಳೂರು : ಗಂಡ ಮತ್ತು ಇತರ ಮೂವರು ವಾಹನವೊಂದರಲ್ಲಿ ಭಗ್ನಾವಸ್ಥೆಯಲ್ಲಿದ್ದ ಮನೆಯೊಂದಕ್ಕೆ ಬಲವಂತವಾಗಿ ಒಯ್ದು ಅತ್ಯಾಚಾರಗೈದಿದ್ದಾರೆ ಎಂದು ಬೆಂಗಳೂರಿನ 34 ವರ್ಷದ ಮಹಿಳೆಯೊಬ್ಬಳು ಭಾರತಿನಗರ ಪೊಲೀಸರಿಗೆ ದೂರು ನೀಡಿದ್ದಾಳೆ.

ಕೆ ಆರ್ ಪುರಂ ನಿವಾಸಿ ಈ ಮಹಿಳೆ ಶುಕ್ರವಾರ ಶಿವಾಜಿನಗರ ಸಮೀಪದ ಬಿದಿರಿನ ಬಜಾರಿನಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು, ದಾರಿಹೋಕರು ಆಕೆಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

“ಮಹಿಳೆ ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಐಪಿಸಿ 376 ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಹಿಳೆ ತನ್ನ ದೂರಿನಲ್ಲಿ ಆಕೆಯ ಎರಡನೇ ಗಂಡ ದೌರ್ಜನ್ಯವೆಸಗಿರುವುದಾಗಿ ಹೇಳಿಕೆ ನೀಡಿದ್ದಾಳೆ. ಆಕೆಗೆ ಒಂದು ಗಂಡು ಮತ್ತು ಹೆಣ್ಣು ಮಗಳಿದ್ದಾಳೆ. ಆದರೆ ಆಕೆಯ ಎರಡನೇ ಗಂಡ ಮಗನನ್ನು ಮಾತ್ರ ಆತನ ಜೊತೆಗೆ ಕರೆದೊಯ್ದಿದ್ದು, ಈ ವಿಚಾರದಲ್ಲಿ ಅವರಿಗೆ ವಿವಾದ ಸೃಷ್ಟಿಯಾಗಿತ್ತು. ವಿವಾದ ತಾರಕಕ್ಕೇರಿತ್ತು. ಇದೇ ಸಂದರ್ಭದಲ್ಲಿ ಆತ ಈ ಕೃತ್ಯವೆಸಗಿದ್ದಾನೆ” ಎಂದು ವಿವರಿಸಿದ್ದಾಳೆ.