ಬೈಕಿಂದ ಬಿದ್ದು ಮಹಿಳೆ ಸಾವು

ಸಾಂದರ್ಭಿಕ ಚಿತ್ರ

ಕುಂದಾಪುರ : ಮಳೆ ಬಂದ ಹಿನ್ನೆಲೆಯಲ್ಲಿ ಕೊಡೆ ಬಿಡಿಸಲು ಹೋದ ಮಹಿಳೆ ಬೈಕಿನಿಂದ ಆಯತಪ್ಪಿ ಕೆಳಬಿದ್ದು ಸಾವನ್ನಪ್ಪಿದ್ದಾರೆ.ಘಟನೆ ಕೋಟ ಪಡುಕೆರೆ ಸಮೀಪ ನಡೆದಿದ್ದು, ಸ್ಥಳೀಯ ಪಡುಕೆರೆ ನಿವಾಸಿ ಸುಗುಣ (39) ಮೃತಪಟ್ಟವರು.

ಶಾಲೆಗೆ ತೆರಳಿದ್ದ ಮಗುವಿಗೆ ಹುಷಾರಿಲ್ಲ ಎಂದು ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಅವರು ಸಹೋದರನ ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರಂತ ನಡೆದಿದೆ. ಈ ಸಂದರ್ಭ ಭಾರೀ ಗಾಳಿ ಮಳೆ ಬಂದಿದ್ದು, ಹಲವು ವಾಹನಗಳು ಅಡ್ಡಾದಿಡ್ಡಿಯಾಗಿ ಉರುಳಿ ಬಿದ್ದಿವೆ.ಕೊಡೆ ಬಿಡಿಸಿದಾಗ ಗಾಳಿಯ ರಭಸಕ್ಕೆ ಸುಗುಣ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರ ತಲೆ ಒಡೆದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.