ಮಗಳನ್ನು ಹಸೆಮಣೆಗೇರಿಸಿ ಇಹಲೋಕ ತ್ಯಜಿಸಿದ ತಾಯಿ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಮಗಳು ಹಸೆಮಣೆಯೇರಿದ ಬಳಿಕ ವಧುವಿನ ತಾಯಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಪಿಲಿಗೂಡು ಅಜಿರದ ಎಕ್ಕಳಿಕೆ ನಿವಾಸಿ ತನಿಯಪ್ಪ ಎಂಬವರ ಪತ್ನಿ ವಾರಿಜಾ (40) ಮೃತ ಮಹಿಳೆ. ಇವರ ಪುತ್ರಿಯ ವಿವಾಹ ಗುರುವಾರ ಮೊಗ್ರು ಗ್ರಾಮದ ಕಂಚಿನಡ್ಕದ ಯುವಕನೊಂದಿಗೆ 34ನೇ ನೆಕ್ಕಿಲಾಡಿಯ ಶ್ರೀ ಗುರುರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆಯಿತು. ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಮದುವೆಯ ವಿಧಿ-ವಿಧಾನಗಳ ಕೊನೆಯ ಹಂತವಾದ ವಧುವನ್ನು ವರನಿಗೆ ಒಪ್ಪಿಸುವ ಕಾರ್ಯಕ್ರಮ ಸಿದ್ಧತೆಯಲ್ಲಿರುವಾಗ ವಾರಿಜಾರು ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದು, ತಕ್ಷಣವೇ ಅವರನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ವಾರಿಜಾ ಅವರಿಗೆ ಈ ಮೊದಲೇ ಹೃದಯದ ಸಮಸ್ಯೆಯಿದ್ದು, ಸರ್ಜರಿಯೂ ಆಗಿತ್ತು. ಇನ್ನೊಂದು ಸರ್ಜರಿ ಆಗಬೇಕಿತ್ತು. ಆದರೆ ಆರ್ಥಿಕ ಮುಗ್ಗಟ್ಟಿನಿಂದಿದ್ದ ಈ ಕುಟುಂಬಕ್ಕೆ ಸರ್ಜರಿ ಮಾಡಿಸಲು ತಕ್ಷಣಕ್ಕೆ ಸಾಧ್ಯವಾಗಿರಲಿಲ್ಲ.

ವಾರಿಜಾರ ಪತಿ ತನಿಯಪ್ಪ ಕೂಡಾ ವಿಕಲಾಂಗರಾಗಿದ್ದು, ಅಲ್ಲಿ ಇಲ್ಲಿ ಕೂಲಿ ಮಾಡಿ ಕುಟುಂಬವನ್ನು ಸಲಹುತ್ತಿದ್ದಾರೆ. ಇವರಿಗೆ  ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದು, ಮಗ ಕೂಡಾ ಅರ್ಧದಲ್ಲಿಯೇ ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದು, ಕುಟುಂಬ ಪೋಷಣೆಗೆ ನೆರವಾಗುತ್ತಿದ್ದ. ಇದ್ದೊಬ್ಬ ಮಗಳ ಮದುವೆಯನ್ನು ಇವರು ಸಂಭ್ರಮದಿಂದಲೇ ನೆರವೇರಿಸಿ, ಮದುವೆ ಮುಗಿಯು ಕೊನೆಯ ಹಂತದಲ್ಲಿ ಇವರು ಇಹಲೋಕ ತ್ಯಜಿಸಿದ್ದಾರೆ.