ಬೈಕ್ ಸವಾರನನ್ನು ತಪ್ಪಿಸಲು ಹೋದ ಟೆಂಪೋ ಪಲ್ಟಿ

ಅಪಘಾತ ಸಂದರ್ಭದಲ್ಲಿ ಬೈಕ್ ಸವಾರ ಟೆಂಪೋದೊಳಗೆ ಸಿಕ್ಕಿಕೊಂಡಿರುವುದು ಹಾಗೂ ಅದರ ಪಕ್ಕದಲ್ಲೇ ಮೀನುಗಾರ ಮಹಿಳೆ ಮೃತಪಟ್ಟಿರುವುದು

ಮಹಿಳೆ ಸ್ಪಾಟ್ ಔಟ್ * 4 ಮಂದಿಗೆ ಗಂಭೀರ ಗಾಯ

ನಮ್ಮ ಪ್ರತಿನಿಧಿ ವರದಿ

ಕುಮಟಾ : ಧಾರೇಶ್ವರದ ಕರ್ನಾಟಕ ಬ್ಯಾಂಕ್ ಎದುರು ಬುಧವಾರ ಬೈಕ್ ಸವಾರರನ್ನು ತಪ್ಪಿಸಲು ಹೋದ ಪ್ರಯಾಣಿಕ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮೀನು ವ್ಯಾಪಾರಕ್ಕೆ ಕುಳಿತುಕೊಂಡಿದ್ದ ಮೀನುಗಾರರ ಮಹಿಳೆ ಮೇಲೆ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಧಾರೇಶ್ವರ ನಿವಾಸಿ ಪರಮೇಶ್ವರಿ ಮೆಂಕಟ್ರಮಣ ಹರಿಕಂತ್ರ (58) ಸ್ಥಳದಲ್ಲೇ ಮೃತಪಟ್ಟರೆ, ಬೈಕ್ ಸವಾರ ಮತ್ತು ಐಆರ್ಬಿ ಕಂಪೆನಿಯ ಸಿಬ್ಬಂದಿ ಉಮೇಶ ರಾಯ (30), ಓಮಿ ಸಾತಪ್ಪ ಹರಿಕಂತ್ರ (56), ಸಾವಿತ್ರಿ ಯಶವಂತ ಅಂಬಿಗ (35) ಹಾಗೂ ಗಿರೀಶ ಹೆಗಡೆ ಕತಗಾಲ ಇವರು ಗಂಭೀರ ಗಾಯಗೊಂಡಿದ್ದಾರೆ. ಪ್ರಯಾಣಿಕರ ಟೆಂಪೋ ಹೊನ್ನಾವರದಿಂದ ಕುಮಟಾ ಕಡೆ ಬರುತ್ತಿರುವ ಸಂದರ್ಭದಲ್ಲಿ ಬೈಕ್ ಅಡ್ಡ ಬಂದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಗೊಂಡವರನ್ನು ಸ್ಥಳೀಯರ ಸಹಕಾರದಿಂದ 108 ವಾಹನದ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬೈಕ್ ಸವಾರ ಉಮೇಶ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಕುಮಟಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.