ಮೊಬೈಲ್, ಸಿಮ್ ಕೊಡುತ್ತೇವೆ ಎಂದು ಮಹಿಳೆಗೆ ವಂಚನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಟಚ್‍ಸ್ಕ್ರೀನ್, ಆ್ಯಂಡ್ರೂಯ್ಡ್ ಮೊಬೈಲ್ ಮತ್ತು ಉಚಿತ ಸಿಮ್ ಕೊಡುವುದಾಗಿ ಮಹಿಳೆಯೊಬ್ಬರಿಗೆ ನಿರಂತರ ಕರೆ ಮಾಡಿ ಕೊನೆಗೆ ದೇವರ ಮೂರ್ತಿಯ ಫೋಟೋ ಕಳುಹಿಸಿ ವಂಚನೆ ಮಾಡಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಪಾವೂರು ಗ್ರಾಮದ ಇನೋಳಿ ಮಜಿಕಟ್ಟ ನಿವಾಸಿ ಜಯಂತಿಲೀಲಾಧರ ಮೋಸಕ್ಕೊಳಗಾದವರು. 9606460362 ಮತ್ತು 9606460374 ಸಂಖ್ಯೆಯಿಂದ ಇವರಿಗೆ ನಿರಂತರ ಕರೆ ಮಾಡಿ “ನಮ್ಮ ಕಂಪೆನಿಯಿಂದ ನಿಮಗೆ ಟಚ್ ಸ್ಕ್ರೀನ್ ಮೊಬೈಲ್ ಮತ್ತು ಉಚಿತ ಬಿ ಎಸ್ ಎನ್‍ಎಲ್ ಸಿಮ್ ಆಫರ್ ಮೂಲಕ ಕೊಡುತ್ತೇವೆ. ನೀವು ಕೇವಲ ಅಂಚೆ ಕಚೇರಿಯಲ್ಲಿ 1650 ರೂಪಾಯಿ ಪಾವತಿಸಿದರೆ ಸಾಕು” ಎಂದು ಹೇಳಿದ್ದರು. ನಿರಂತರವಾಗಿ ಈ ಕರೆ ಬರುತ್ತಿರುವುದನ್ನು ನಿಜವೆಂದೇ ನಂಬಿದ ಜಯಂತಿ ಕೊನೆಗೆ ಅಂಚೆ ಕಚೇರಿಗೆ ತೆರಳಿ ಅಲ್ಲಿ ದುಡ್ಡು ಪಾವತಿ ಮಾಡಿದ್ದಾರೆ. ಕೆಲವು ದಿನಗಳ ಬಳಿಕ ಎಕ್ಸ್‍ಪ್ರೆಸ್ ಪಾರ್ಸೆಲ್ ಕೋಡ್ ಲಕೋಟೆಯಲ್ಲಿ ಇವರಿಗೆ ಕಟ್ಟೊಂದು ಬಂದಿದೆ. ತನ್ನ ಮೊಬೈಲ್ ಬಾಕ್ ಬಂದಿದೆ ಎಂದು ಖುಷಿಯಿಂದಲೇ ಅದನ್ನು ತೆರೆದ ಜಯಂತಿಗೆ ಆಘಾತ ಕಾದಿತ್ತು. ತಾವು ಮೋಸ ಹೋಗಿರುವುದು ಅದಾಗ ಗೊತ್ತಾಗಿದೆ.

ಬಾಕ್ಸನಲ್ಲಿ ಚಿನ್ನ ಲೇಪಿತ ಕೆಲವು ಮೂರ್ತಿಯ ವಿಗ್ರಹಗಳು ಬಂದಿವೆ. ಈ ಬಗ್ಗೆ ಮತ್ತೆ ವಿಚಾರಿಸಲೆಂದು ಅವರು ಆ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಅವರು ಅಸಂಬದ್ಧ ಮಾತನಾಡಿದ್ದಾರೆ ಎಂದು ಜಯಂತಿ ದೂರಿದ್ದಾರೆ.