ಪರ್ಸ್, ಮೊಬೈಲ್ ಎಗರಿಸಿದ ಕಳ್ಳನನ್ನು ಬೆಂಬತ್ತಿ ಹಿಡಿದ ಮಹಿಳೆ

ಸಾಂದರ್ಭಿಕ ಚಿತ್ರ

ಬೆಂಗಳೂರು : ಜಾಲಹಳ್ಳಿಯ 35 ವರ್ಷದ ಮಹಿಳೆಯೊಬ್ಬಳು ಶಂಕಿತ ಕಳ್ಳನೊಬ್ಬನನ್ನು ಬೆಂಬತ್ತಿ ಹಿಡಿದು ಆತನನ್ನು ಪೊಲೀಸ್ ಠಾಣೆಗೆ ಎಳೆದೊಯ್ದು ಸಾಹಸ ಮೆರೆದಿದ್ದಾಳೆ. ಇದೀಗ ಈ ಅಪ್ರಾಪ್ತ ಕಳ್ಳನ ಮೂಲಕ ಪೊಲೀಸರು ನಗರದಲ್ಲಿ ಸಕ್ರಿಯವಾಗಿರುವ ಅಪ್ರಾಪ್ತ ಕಳ್ಳರ ಜಾಲವೊಂದನ್ನು ಬೇಧಿಸಲು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.

ಸಾವಿತ್ರಿ ಎಂಬ ಮಹಿಳೆ ಹೆಬ್ಬಾಳದಲ್ಲಿ ಬಸ್ ಹತ್ತುತ್ತಿರುವಾಗ ಬಾಲಕನೊಬ್ಬ ಆಕೆಯ ಫೋನ್ ಮತ್ತು ಪರ್ಸ್ ಸೆಳೆದು ಓಡಲಾರಂಭಿಸಿದ್ದ. ಆಕೆ ಕೂಡಲೇ ಆತನನ್ನು ಹಿಂಬಾಲಿಸಿ ಓಡಿದಳು. ಆತ ತನ್ನ ಕೈಯ್ಯಲ್ಲಿದ್ದ ಪರ್ಸ್ ಮತ್ತು ಮೊಬೈಲನ್ನು ತನ್ನ ಸಹಚರನೊಬ್ಬನಿಗೆ ನೀಡಿದ ನಂತರ ಇಬ್ಬರೂ ಬೇರೆ ಬೇರೆ ದಿಕ್ಕಿನಲ್ಲಿ ಓಡಲಾರಂಭಿಸಿದರೂ ಅವರಲ್ಲೊಬ್ಬನನ್ನು ಹಿಂಬಾಲಿಸಿದ ಸಾವಿತ್ರಿ ಸ್ಥಳೀಯರ ಸಹಾಯದಿಂದ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಳು. ಸಾರ್ವಜನಿಕರು ಆ ಯುವಕನಿಗೆ ಚೆನ್ನಾಗಿ ಥಳಿಸಿದರು ಕೂಡ. ಕೊನೆಗೆ ಸ್ಥಳೀಯರೊಬ್ಬರ ಸಹಾಯದಿಂದ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದಾಗ ಅಲ್ಲಿ ಆತನ ವಯಸ್ಸು ಕೇವಲ 15 ಎಂದು ತಿಳಿದಾಗ ಸಾವಿತ್ರಿಗೆ ಆಘಾತವಾಗಿತ್ತು.

ಆದರೂ ಆತನನ್ನು ವಿಚಾರಣೆಗೊಳಪಡಿಸಿ ಆತನಿಂದ ಕೆಲವೊಂದು ಫೋನ್ ಸಂಖ್ಯೆಗಳನ್ನು ಪಡೆದ ಪೊಲೀಸರು ಬಳ್ಳಾರಿ ರಸ್ತೆಯ ಬಸ್ ನಿಲ್ದಾಣ ಹಾಗೂ ಹೆಬ್ಬಾಳ ಮತ್ತು ಕೊಡಿಗೆಹಳ್ಳಿ ಪ್ರದೇಶಗಳಲ್ಲಿ ಜನಸಂದಣಿಯಿರುವಲ್ಲಿ ಜನರ ಪರ್ಸು, ಬೆಲೆಬಾಳುವ ವಸ್ತುಗಳನ್ನು ಕದಿಯುವ ಅಪ್ರಾಪ್ತ ಕಳ್ಳರ ಗ್ಯಾಂಗ್ ಒಂದರ ಬಗ್ಗೆ ತಿಳಿದುಕೊಂಡು ಈ ಜಾಲವನ್ನು ಬೇಧಿಸಲು ಪ್ರಯತ್ನ ಆರಂಭಿಸಿದ್ದಾರೆ.

ಸ್ಥಳೀಯ ಕೆಲ ಗ್ಯಾಂಗುಗಳು ಅಪ್ರಾಪ್ತರನ್ನು ಬಳಸಿಕೊಂಡು ತಮ್ಮ ಕಾರ್ಯ ಸಾಧಿಸುತ್ತಿದ್ದು, ಈ ಹುಡುಗರು ಪೊಲೀಸ್ ವಶವಾದರೂ ಒಂದೆರಡು ದಿನಗಳಲ್ಲಿ ಅವರ ಬಿಡುಗಡೆಯಾಗುವುದರಿಂದ ಅವರ ಕಾರ್ಯ ಸುಲಭವಾಗಿ ಬಿಟ್ಟಿದೆಯೆಂದು ಪೊಲೀಸರು ಅಭಿಪ್ರಾಯ ಪಡುತ್ತಾರೆ.