ಮಹಿಳೆಗೆ ಮಾರಣಾಂತಿಕ ಹಲ್ಲೆ

ಸಹೋದರರಿಬ್ಬರ ಕೃತ್ಯ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಹುಣಸೆ ಹಣ್ಣು ಹೆಕ್ಕುತ್ತಿದ್ದ ಮಹಿಳೆಯ ಮೇಲೆ ಪೂರ್ವದ್ವೇಷ ಹೊಂದಿದ್ದ ಸಹೋದರರಿಬ್ಬರು ಮಾರಣಾಂತಿಕ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಅಮಾನವೀಯ ಘಟನೆ ವಿಟ್ಲ ಸಮೀಪ ನಡೆದಿದೆ.

ವಿಟ್ಲ ಕಸಬಾ ಗ್ರಾಮದ ಕೂಟೇಲು ನಿವಾಸಿ ಅನಿತಾ ವೇಗಸ್ (35) ಎಂಬಾಕೆ ಸಹೋದರರಿಬ್ಬರ ರಾಕ್ಷಸೀ ಕೃತ್ಯಕ್ಕೆ ತುತ್ತಾದ ಮಹಿಳೆ. ತನ್ನ ಮನೆ ಸಮೀಪದ ಹುಣಸೆ ಮರದಿಂದ ಕೊಯ್ದಿರುವ ಹಣ್ಣನ್ನು ಅನಿತಾ ಹೆಕ್ಕುತ್ತಿದ್ದ ಸಂದರ್ಭ ನೆರೆಯ ನಿವಾಸಿ ಆಂಡ್ರು ವೇಗಸ್ ಪುತ್ರ ಲಾರೆನ್ಸ್ ವೇಗಸ್ (38) ಸ್ಥಳಕ್ಕೆ ಬಂದಿದ್ದನೆನ್ನಲಾಗಿದೆ. ಅನಿತಾಳನ್ನು ಮನಬಂದಂತೆ ಬೈಯುತ್ತಾ ಕೊಕ್ಕೆಯಿಂದ ಹಲ್ಲೆ ನಡೆಸಿದ್ದ ಲಾರೆನ್ಸ್ ಕೈಹಿಡಿದೆಳೆದು ಮಾನಭಂಗಕ್ಕೆ ಮುಂದಾಗಿದ್ದನೆಂದು ಗಾಯಾಳು ತಿಳಿಸಿದ್ದಾರೆ. ಬೆದರಿದ ಅನಿತಾ ಸಹಾಯಕ್ಕಾಗಿ ಬೊಬ್ಬೆ ಹೊಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಲಾರೆನ್ಸನ ಅಣ್ಣ ಡೇವಿಡ್ ವೇಗಸ್ ಕೂಡಾ ಸಹೋದರ ಕುಕೃತ್ಯ ಬೆಂಬಲಿಸುತ್ತಾ ಅನಿತಾಳ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾನೆಂದು ಗಾಯಾಳು ದೂರು ನೀಡಿದ್ದಾಳೆ.

ಸಹೋದರರಿಬ್ಬರ ರಾಕ್ಷಸೀ ಕೃತ್ಯವನ್ನು ಕಣ್ಣಾರೆ ನೋಡಿದ ಅನಿತಾಳ ಅತ್ತೆ ಬೊಬ್ಬೆ ಹೊಡೆಯುತ್ತಾ ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಮತ್ತೆ ಜೀವ ಬೆದರಿಕೆ ಹಾಕುತ್ತಾ ಪರಾರಿಯಾದರೆಂದು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳು ಪೊಲೀಸರಿಗೆ ದೂರು ನೀಡಿದ್ದಾರೆ.