ಸೊಸೆ, ಪುಟಾಣಿ ಮಕ್ಕಳ ಮೇಲೆ ಅಮಾನುಷ ದೌರ್ಜನ್ಯವೆಸಗಿದ ಅತ್ತೆ

ಹಲ್ಲೆ ಪ್ರಕರಣಕ್ಕೆ ತಿರುವು

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಮಗ ತಾಯಿಯ ಮೇಲೆ ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಸುಡಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಪ್ರಕರಣ ತಿರುಚಲು ಯತ್ನಿಸಿದ್ದ ರಾದಮ್ಮ ಅವರೇ ಪ್ರಕರಣದಲ್ಲಿ ತನ್ನ ಸೊಸೆ ಹಾಗೂ ಆಕೆಯ ಇಬ್ಬರು ಪುಟಾಣಿ ಮಕ್ಕಳ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಿರುವ ವಿಡಿಯೊ ತುಣುಕು ಇದೀಗ ಬಹಿರಂಗಗೊಂಡಿದ್ದು, ಪ್ರಕರಣವೇ ಹೊಸ ತಿರುವು ಪಡೆದುಕೊಂಡಿದೆ.

ಭಾನುವಾರ ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ಎಂಬಲ್ಲಿ ಜಾಗಕ್ಕೆ ಅಗಳು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ರಾಧಮ್ಮ ಹಾಗೂ ಮಗ ಹರೀಶ್ ಗೌಡ ಮಧ್ಯೆ ಜಗಳ ನಡೆದಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಜಾಗಕ್ಕೆ ಬೇಲಿ ಹಾಕಲು ಮುಂದಾಗುವ ವೇಳೆ ಅದಕ್ಕೆ ತಡೆ ಒಡ್ಡಲಾಗಿತ್ತು. ತನ್ನ ಸ್ವಂತ ಮಗನ ವಶದಲ್ಲಿರುವ ಜಾಗಕ್ಕೇ ಬೇಲಿ ಹಾಕಲು ತಂದೆ, ತಾಯಿ ಮುಂದಾಗಿ ದೌರ್ಜನ್ಯ ಎಸಗಿದ್ದರು ಎನ್ನಲಾಗಿದೆ. ಈ ಸಂದರ್ಭ ಅಕ್ರಮ ಪ್ರವೇಶಿಸಿದ ಜೆಸಿಬಿಗೆ ಅಡ್ಡಲಾಗಿ ಸೊಸೆ ಹಾಗೂ ಇಬ್ಬರು ಎಳೆಯ ಮಕ್ಕಳು ನಿಂತಿದ್ದಾರೆ. ಇದೇ ವೇಳೆ ಸೊಸೆಯ ಬಳಿಗೆ ಹೋದ ಅತ್ತೆ ಮತ್ತು ನಾದಿನಿ, ಮಗುವನ್ನು ತಾಯಿಯಿಂದ ಕಿತ್ತೆಸೆದಿದ್ದಾರೆ. ದೌರ್ಜನ್ಯಕ್ಕೊಳಗಾದ ಮಗು ಅಳುತ್ತಿದ್ದು ಮಗುವನ್ನು ಪಕ್ಕಕ್ಕೆ ದೂಡಿದ ಇವರು ಬಳಿಕ ಪುಟ್ಟ ಮಗುವಿನೊಂದಿಗೆ ನಿಂತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು, ನೋವು ಸಹಿಸಲಾಗದೆ ಜೋರಾಗಿ ಕಿರುಚಾಡಿ ಅಳುತ್ತಿದ್ದ ಮಗುವಿನೊಂದಿಗೆ ಆಕೆಯನ್ನು ದೂಡಿ ಹಾಕಿ ಜೆಸಿಬಿ ಹೋಗಲು ಅನುವುಮಾಡಿ ಕೊಡುತ್ತಿರುವ ವಿಡಿಯೋ ದೃಶ್ಯಗಳು ಬಹಿರಂಗಗೊಂಡಿದೆ.

ಘಟನೆಯ ಬೆನ್ನಲ್ಲೇ ತನ್ನ ಮೇಲಾಗಬಹುದಾದ ಸಂಭಾವ್ಯ ಕಾನೂನು ಕ್ರಮಗಳ ಬಗ್ಗೆ ಭಯಗೊಂಡು ತಾನೇ ಆಸ್ಪತ್ರೆಗೆ ದಾಖಲಾಗಿರುವ ರಾಧಮ್ಮ ತನ್ನ ಮಗ ಹಾಗೂ ಸೊಸೆ ತನ್ನ ಮೇಲೆ ಹಲ್ಲೆಗೈದು ತನ್ನ ಮೇಲೆ ಪಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.

ಪೊಲೀಸರು ಈಕೆಯ ದೂರನ್ನು ದಾಖಲಿಸಿಕೊಂಡಿದ್ದರು. ಆದರೆ ಪ್ರಕರಣದಲ್ಲಿ ಅತ್ತೆ ರಾಧಮ್ಮಳೇ ಸೊಸೆ ಮತ್ತು ಮಕ್ಕಳ ಮೇಲೆ ಅಮಾನುಷವಾಗಿ ದೌರ್ಜನ್ಯವೆಸಗುತ್ತಿರುವ ವಿಡಿಯೋಗಳು ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.