ಮಹಿಳೆಗೆ ಯುವಕರಿಂದ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಜಾಗ ಮತ್ತು ಖಾಸಗಿ ಕಾಲ್ದಾರಿಯೊಂದರ ವಿಚಾರದಲ್ಲಿ ಎರಡು ಕುಟುಂಬಗಳ ಮಧ್ಯೆ ನಡೆದ ಪರಸ್ಪರ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಮಹಿಳೆಯೊಬ್ಬರು ಯುವಕರಿಬ್ಬರಿಂದ ಹಲ್ಲೆಗೊಳಗಾದ ಘಟನೆ ಕರಾಯ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕರಾಯ ಗ್ರಾಮದ ಜನತಾ ಕಾಲೊನಿ ನಿವಾಸಿ ನೆಬಿಸಾ (51) ಹಲ್ಲೆಗೊಳಗಾಗಿದ್ದು ನೆರೆಯ ಪ್ರಸಾದ್ ಮತ್ತು ತುಕಾರಾಮ್ ಹಲ್ಲೆಗೈದವರು. ನೆಬಿಸಾ ತಮ್ಮ ಜಾಗದ ಮೂಲಕ ಹಾದು ಹೋಗುವ ಕಾಲ್ದಾರಿಗೆ ಅವಕಾಶ ಕೊಟ್ಟಿದ್ದರೂ ತೃಪ್ತರಾಗದ ನೆರೆ ಮನೆಯ ಕುಟುಂಬ ಕ್ಷುಲ್ಲಕ ವಿವಾದವು ಜಗಳಕ್ಕೆ ತಿರುಗಲು ಕಾರಣವಾಗಿದ್ದು, ಇದೀಗ ರಾತ್ರಿ ಆಕೆ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿ ಸಾಮಾಜಿಕ ನ್ಯಾಯ ಸಮಿತಿಯ ಪರವಾಗಿ ನಿನ್ನೆ ಸ್ಥಳಕ್ಕೆ ಭೇಟಿ ನೀಡಿ ಎರಡೂ ಕುಟುಂಬಗಳ ಮಧ್ಯೆ ಉಂಟಾಗಿದ್ದ ಕಾಲ್ದಾರಿ ಮತ್ತು ಜಾಗದ ವಿವಾದವನ್ನು ಮಾತುಕತೆ ಮೂಲಕ ಮನವೊಲಿಸಿ ಬಗೆಹರಿಸಲು ಯತ್ನಿಸಿದ್ದರು. ಕಾಲ್ದಾರಿ ಬಿಟ್ಟು ಕೊಡುವುದಾಗಿ ನೆಬಿಸಾ ಒಪ್ಪಿಕೊಂಡಿದ್ದರೂ ರಾತ್ರಿ ಮದ್ಯ ಸೇವಿಸಿ ಸ್ಥಳಕ್ಕಾಗಮಿಸಿದ ಪ್ರಸಾದ್ ಹಾಗೂ ತುಕಾರಾಮ ನೆಬಿಸಾರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ಬೆನ್ನಲ್ಲೇ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಉಪ್ಪಿನಂಗಡಿ ಪೊಲೀಸರು ಎರಡೂ ಕುಟುಂಬಗಳನ್ನು ಮಂಗಳವಾರ ಠಾಣೆಗೆ ಬರುವಂತೆ ಸೂಚಿಸಿದ್ದು, ಹಲ್ಲೆಗೊಳಗಾದ ನೆಬಿಸಾ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.