ಅಮಾನ್ಯೀಕರಣ ಗಡುವು ಮುಗಿದರೂ ಮುಗಿಯದ ಹಳೆಯ ನೋಟಿನ ಕಥೆ

ತಮ್ಮ ಬಳಿ ಇರುವ ನಿಷೇಧಿತ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆರ್ ಬಿ ಐ ಕಚೇರಿಯ ಹೊರಗೆ ಸಾಲುಗಟ್ಟಿ ನಿಂತಿರುವ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

2017ರ ಜನವರಿ ಎರಡನೆ ವಾರದ ವೇಳೆಗೆ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಸಲ್ಲಿಸಲು ಕೊಟ್ಟ ಗಡುವು ತೀರಿ ಎರಡು ವಾರಗಳಾಗಿವೆ. ಆದರೆ ದೇಶದ ವಿವಿಧ ನಗರಗಳಲ್ಲಿ ಆರ್ ಬಿ ಐ ಎದುರು ಸಾಲುಗಟ್ಟಿ ನಿಂತ ಜನರನ್ನು ನೋಡಿದರೆ ಈ ಸಮಸ್ಯೆ ಇನ್ನೂ ನೀಗಿಲ್ಲ ಎಂದು ಸ್ಪಷ್ಟವಾಗುತ್ತದೆ.
ವರ್ಷದ ಕೊನೆಯ ಭಾಷಣದಲ್ಲಿ ಪ್ರಧಾನಿ ಮೋದಿ ಗಡುವು ತೀರಿದ ನಂತರ ಹಳೆಯ ನೋಟುಗಳನ್ನು ಹೊಂದಿರುವುದು ಅಕ್ರಮ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನವಂಬರ್ 8ರಿಂದ ಡಿಸೆಂಬರ್ 30ರವರೆಗೆ ಸರ್ಕಾರ ಹಲವಾರು ಬಾರಿ ನಿಯಮಗಳನ್ನು ಬದಲಾಯಿಸಿದೆ. ಅನಿವಾಸಿ ಭಾರತೀಯರಿಗೆ ಮತ್ತು ವಿದೇಶ ಪ್ರವಾಸದಲ್ಲಿರುವವರಿಗೆ ರಿಯಾಯಿತಿಯನ್ನೂ ಕಡೆಯ ಕ್ಷಣದಲ್ಲಿ ನೀಡಲಾಗಿದೆ.
ತಮ್ಮ ನವಂಬರ್ 8ರ ಭಾಷಣದಲ್ಲಿ ಮೋದಿ ಡಿಸೆಂಬರ್ 30ರ ಗಡುವು ತೀರಿದ ನಂತರವೂ ಜನರಿಗೆ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಸಕಾರಣ ನೀಡಿ ನೋಟು ಸಲ್ಲಿಸಿದರೆ ಮಾನ್ಯಮಾಡುವುದಾಗಿ ಹೇಳಿದ್ದರು. ಆದರೆ ಈಗ ಹಠಾತ್ತನೆ ನಿಯಮಗಳನ್ನು ಬದಲಿಸಲಾಗಿದ್ದು ಕೇವಲ ಅನಿವಾಸಿ ಭಾರತೀಯರಿಗೆ ಮಾತ್ರ ಈ ಸೌಲಭ್ಯವನ್ನು ಒದಗಿಸಲಾಗಿದೆ. ಇದರಿಂದ ನೊಂದ ಸಾರ್ವಜನಿಕರು ಆರ್ ಬಿ ಐ ಕಚೇರಿಯ ಮುಂದೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ತಮ್ಮ ಬಳಿ ಇರುವ ನಿಷೇಧಿತ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆರ್ ಬಿ ಐ ಕಚೇರಿಯ ಹೊರಗೆ ಸಾಲುಗಟ್ಟಿ ನಿಂತಿರುವ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೆಹಲಿಯ ರಿಸರ್ವ್ ಬ್ಯಾಂಕ್ ಶಾಖೆಯೆದುರು ತನ್ನ ಬಳಿ ಇದ್ದ 5000 ರೂ ವಿನಿಮಯ ಮಾಡಲು ಮುಂದಾಗಿದ್ದ ಮಹಿಳೆಯೊಬ್ಬರು ಅವಕಾಶ ದೊರೆಯದಿದಾಗ ತಮ್ಮ ಬಟ್ಟೆ ಬಿಚ್ಚಿ ಪ್ರದರ್ಶಿಸಿದ್ದಾರೆ. ಅರ್ ಬಿ ಐ ಅಧಿಕಾರಿಗಳು ಸಾಲುಗಟ್ಟಿ ನಿಂತ ಜನಸಾಮಾನ್ಯರನ್ನು ಕಡೆಗಣಿಸಿ ಅನಿವಾಸಿ ಭಾರತೀಯರಿಗೆ ವಿಶೇಷ ಪ್ರವೇಶ ನೀಡುತ್ತಿರುವುದು ಜನರ ಆಕ್ರೋಶವನ್ನು ಹೆಚ್ಚಿಸಿದೆ.
ಕೇವಲ ವಿದೇಶೀಯರಿಗೆ ಮಾತ್ರ ಆದ್ಯತೆಯೇ ಭಾರತೀಯರಿಗೆ ಇಲ್ಲವೇ ಎಂಬ ಆಕ್ರೋಶದ ನುಡಿಗಳು ಸಾಮಾನ್ಯವಾಗಿವೆ.
ಮುಂಬಯಿಯ ರೈತನೊಬ್ಬ ತನ್ನ ಹಸುವಿಗೆ ಕಾಣಿಕೆ ಸಲ್ಲಿಸುತ್ತಿದ್ದ ಹುಂಡಿಯೊಳಗೆ ಇದ್ದ 2500 ರೂಗಳನ್ನು ವಿನಿಮಯಕ್ಕಾಗಿ ತರುತ್ತಾನೆ. ಮತ್ತೊಂದು ಪ್ರಕರಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಮಹಿಳೆಯೊಬ್ಬರು ತಮಗೆ ಅರಿವಿಲ್ಲದೆಯೇ ತಮ್ಮ ಸೀರಿಯ ಮಡಿಕೆಯ ನಡುವೆ 20 ಸಾವಿರ ರೂ ಇಟ್ಟಿದ್ದು ಅದನ್ನು ವಿನಿಮಯ ಮಾಡಿಕೊಳ್ಳಲು ರಿಸರ್ವ್ ಬ್ಯಾಂಕಿಗೆ ಬಂದಿದ್ದಾರೆ. ಬೈಕುಲಾದಲ್ಲಿರುವ ಸಬೂ ಸಿದ್ದಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ತನ್ನ ಹುಂಡಿಯಲ್ಲಿ ಕಂಡ 2500 ರೂ ವಿನಿಮಯಕ್ಕಾಗಿ ತಂದಿದ್ದಾರೆ. ಮತ್ತೊಬ್ಬ ಗೃಹಿಣಿ ವಿಜಯ ತನ್ನ ಕುಡುಕ ಮಗನಿಂದ ಹಣವನ್ನು ರಕ್ಷಿಸುವ ಸಲುವಾಗಿ ತಾಯಿಯ ಖಾತೆಗೆ ಜಮಾ ಮಾಡಿದ್ದಾರೆ. ಮರೀನ್ ಲೈನ್ಸ್ ನಿವಾಸಿಗಳಾದ ನವದಂಪತಿಗಳು ಡಿಸೆಂಬರ್ 15ರಂದು ನಡೆದ ವಿವಾಹದ ಸಂದರ್ಭದಲ್ಲಿ ಪಡೆದ 3000 ರೂ ಹಣವನ್ನು ತಮ್ಮ ಖಾತೆಯಲ್ಲಿ ಪಾವತಿ ಮಾಡಲು ಸಜ್ಜಾಗಿದ್ದಾರೆ. ಮತ್ತೊಂದು ಘಟನೆಯಲ್ಲಿ ಗುಜರಾತಿನ 78 ವರ್ಷದ ಮಹಿಳೆ ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದರ ಕಾರಣ 5000 ರೂ ಪಿಂಚಣಿ ಹಣವನ್ನು ಹಾಗೆಯೇ ಉಳಿಸಿಕೊಂಡು ಈಗ ಆರ್ಬಿಐಗೆ ಸಲ್ಲಿಸಲು ಮುಂದಾಗಿದ್ದಾರೆ. ಚಲಾವಣೆಯಲ್ಲಿದ್ದ ಶೇ 86ರಷ್ಟು ನಗದನ್ನು ರದ್ದುಪಡಿಸುವ ಮೂಲಕ ದೇಶದ 120 ಕೋಟಿ ಜನತೆಯನ್ನು ಸಂಕಷ್ಟಕ್ಕೀಡುಮಾಡಿರುವುದು ಸ್ಪಷ್ಟ.