‘ಇಸ್ಲಾಮಿಕ್ ಉಗ್ರವಾದವನ್ನು ಮೂಲೋತ್ಪಾಟನೆ ಮಾಡುವೆ’

ಟ್ರಂಪ್ ಘೋಷಣೆ

ವಾಷಿಂಗ್ಟನ್ : ಅಮೆರಿಕಾದ 45ನೇ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್  ಇಸ್ಲಾಮಿಕ್ ಉಗ್ರವಾದದ  ವಿರುದ್ಧದ ಹೋರಾಟ ತಮ್ಮ ವಿದೇಶಾಂಗ ನೀತಿಯ ಮುಖ್ಯ ಭಾಗವಾಗಿರುವುದಾಗಿ ಘೋಷಿಸಿದರಲ್ಲದೆ  ತಮ್ಮ ದೇಶ ಮಿತ್ರ ರಾಷ್ಟ್ರಗಳೊಂದಿಗೆ ಸೇರಿ ಜಿಹಾದಿಗಳ ಬೆದರಿಕೆಗಳನ್ನು ಮಟ್ಟ ಹಾಕುವುದಾಗಿ ವಾಗ್ದಾನ ಮಾಡಿದ್ದಾರೆ.

“ಜಗತ್ತಿನಿಂದ ಇಸ್ಲಾಮಿಕ್ ಉಗ್ರವಾದವನ್ನು ಕಿತ್ತೆಸೆಯಲು ಹೊಸ ಮೈತ್ರಿಕೂಟವನ್ನು ಸಾಧಿಸಿ ಜಗತ್ತಿನ ನಾಗರಿಕ ಸಮಾಜವನ್ನು ಒಂದುಗೂಡಿಸುತ್ತೇನೆ” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ತಮ್ಮ ಹೊಸ ಸರಕಾರದ ನೀತಿಗಳ ಬಗ್ಗೆ ಟ್ರಂಪ್ ಅಧ್ಯಕ್ಷರಾಗಿ ತಮ್ಮ ಮೊದಲ ಭಾಷಾಣದಲ್ಲಿ ಹೆಚ್ಚೇನೂ ಹೇಳದೇ ಇದ್ದರೂ ಉಗ್ರವಾದದ ವಿರುದ್ಧದ ಹೊರಾಟದ ಅವರ ಮಾತುಗಳಿಂದ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ  ಕೈಜೋಡಿಸಿ ಉಗ್ರವಾದದ ವಿರುದ್ಧ ಹೋರಾಡಲು ಮನಸ್ಸು ಮಾಡಿದ್ದಾರೆಂಬುದನ್ನು ಅದು ಸೂಚಿಸುತ್ತದೆ.

ಅಮೆರಿಕಾದ ಪೂರ್ವಾಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಅವರು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿ ತಾಲಿಬಾನಿಗಳನ್ನು ಮಟ್ಟ ಹಾಕಿದ್ದರೆ ಬರಾಕ್ ಒಬಾಮ ಆಡಳಿತದಲ್ಲಿ ಉಗ್ರ ಒಸಾಮ ಬಿನ್ ಲಾಡೆನ್ ಹತ್ಯೆ ನಡೆದಿತ್ತು. ಆದರೆ ಟ್ರಂಪ್ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಭಾಷ್ಯೆಯಲ್ಲಿ ವ್ಯಾಖ್ಯಾನಿಸಿ ಇಸ್ಲಾಮಿಕ್ ಉಗ್ರವಾದ ಹಾಗೂ ನಾಗರಿಕತೆಯ ನಡುವಣ ಯುದ್ಧ ಜರುಗಲಿದೆ ಎಂದು ಹೇಳಿದ್ದಾರೆ.