ಕಂಬಳಕ್ಕಾಗಿ ರಾಜ್ಯ ಸರಕಾರದಿಂದ ಸುಗ್ರೀವಾಜ್ಞೆ ?

ಬೆಂಗಳೂರು : ತಮಿಳುನಾಡಿನಲ್ಲಿ ಭಾರೀ ಪ್ರತಿಭಟನೆಗಳ ನಂತರ ಅಲ್ಲಿನ ಜಲ್ಲಿಕಟ್ಟು ಕ್ರೀಡೆಗೆ ಸರಕಾರ ಅನುಮತಿ ನೀಡುತ್ತಿದ್ದಂತೆಯೇ ಕರ್ನಾಟಕದ ಕಂಬಳ ಅಭಿಮಾನಿಗಳೂ ಎಚ್ಚರಗೊಂಡಿದ್ದಾರೆ. ಕರಾವಳಿ ಜಿಲ್ಲೆಗಳ ಜಾನಪದ ಕ್ರೀಡೆ ಕಂಬಳದ ಮೇಲಿನ ನಿಷೇಧ ತೆರವುಗೊಳಿಸಬೇಕೆಂಬ ಬೇಡಿಕೆ ಮುಗಿಲು ಮುಟ್ಟುತ್ತಿದೆ. ಬೆಂಗಳೂರಿನಲ್ಲಿ ಪ್ರತಿಭಟನೆಗಳು ನಡೆದಿವೆ. ದಕ್ಷಿಣ ಕನ್ನಡದಲ್ಲೂ ಕಂಬಳ ಆಯೋಜಕರು ಎಲ್ಲರ ಸಹಕಾರದಿಂದ ಪ್ರತಿಭಟನೆಗೆ ಸಜ್ಜಾಗಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಸರಕಾರ ಕಂಬಳದ ಪರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ರಾಜ್ಯ ಸರಕಾರ ತಮಿಳುನಾಡಿನ ಮಾದರಿಯಲ್ಲಿಯೇ ಕಂಬಳ ನಡೆಸಲು ಅನುವು ಮಾಡಿ ಕೊಡಲು ಸುಗ್ರೀವಾಜ್ಞೆಯ ದಾರಿ ಹಿಡಿಯುವ ಬಗ್ಗೆ ಯೋಚಿಸುತ್ತಿದೆ. ಕಾನೂನು ಸಚಿವ ಟಿ ಬಿ ಜಯಚಂದ್ರ ಅವರು ಹೇಳಿದಂತೆ ರಾಜ್ಯ ಸರಕಾರ ಈಗಾಗಲೇ ತನ್ನ  ಅಧಿಕಾರಿಗಳಿಗೆ ತಮಿಳುನಾಡು ಸರಕಾರ ಜಲ್ಲಿಕಟ್ಟು ಅನುಮತಿಸುವ ಸಲುವಾಗಿ ತಯಾರಿಸಿದ್ದ ಸುಗ್ರೀವಾಜ್ಞೆಯ  ಪ್ರತಿಯೊಂದನ್ನು ತರಿಸಿಕೊಳ್ಳುವಂತೆ ಹೇಳಿದೆ.

“ತಮಿಳುನಾಡಿನ ಅಧ್ಯಾದೇಶವನ್ನು ನಾವು ಅಧ್ಯಯನ  ನಡೆಸುತ್ತೇವೆ. ಕಂಬಳದ ವಿಚಾರ ನ್ಯಾಯಾಲಯದ ಮುಂದಿರುವುದರಿಂದ ಹಾಗೂ ಪ್ರಾಣಿಗಳಿಗೆ ಯಾವುದೇ ರೀತಿಯ ಹಿಂಸೆ ನೀಡುವ ಕ್ರೀಡೆಗಳನ್ನು ಕೇಂದ್ರದ ಎರಡು ಶಾಸನಗಳೂ ನಿಷೇಧಿಸಿರುವುದರಿಂದ ಇದೀಗ ನಿಯಮಗಳಲ್ಲಿ ವಿನಾಯಿತಿ ನೀಡುವ ನಿರ್ಧಾರ ಕೇಂದ್ರದ ಕೈಯ್ಯಲ್ಲಿದೆ” ಎಂದು ಜಯಚಂದ್ರ ಹೇಳುತ್ತಾರೆ.

“ಕಂಬಳವನ್ನು ಜಲ್ಲಿಕಟ್ಟುವಿಗೆ ಹೋಲಿಸಲು ಸಾಧ್ಯವಿಲ್ಲ. ಇಲ್ಲಿ ಪ್ರಾಣಿಗಳ ಮೇಲೆ ಹಿಂಸೆಗೆ ಆಸ್ಪದವಿಲ್ಲ. ಮೇಲಾಗಿ ಕರಾವಳಿಯ ಜನತೆಗೆ ಈ ಸಾಂಪ್ರದಾಯಿಕ ಕ್ರೀಡೆಯ ಜತೆ ಭಾವನಾತ್ಮಕ ಸಂಬಂಧವಿದೆ” ಎಂದೂ ಸಚಿವರು ಹೇಳಿದ್ದಾರೆ.

ಕಾನೂನು ಇಲಾಖಾ ಮೂಲಗಳು ಹೇಳುವಂತೆ ಕರ್ನಾಟಕಕ್ಕೆ ಸುಗ್ರೀವಾಜ್ಞೆಯ ದಾರಿ ಹಿಡಿಯುವುದು ಕಷ್ಟವೇನಲ್ಲ. ಮೇಲಾಗಿ ಕಂಬಳವನ್ನು ಅನುಮತಿಸುವ  ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಸಹಮತ ಹೊಂದಿರುವುದರಿಂದ ಈ ಬಗ್ಗೆ ಸದನ ಕೂಡ ಕಾನೂನೊಂದನ್ನು ಅನುಮೋದಿಸಬಹುದು.

2015ರಲ್ಲಿ ಕಂಬಳ ಕ್ರೀಡೆಯ ಬಗ್ಗೆ ಬೀದರಿನ ಪಶುವೈದ್ಯಕೀಯ ವಿಶ್ವವಿದ್ಯಾಲಯದ ತಜ್ಞರು ನೀಡಿದ ವರದಿಯೂ ಕಂಬಳದ ಮೇಲೆ ನಿಷೇಧ ಹೇರಬೇಕೆನ್ನುವ ಶಿಫಾರಸು ಮಾಡಿಲ್ಲ. ಈ ವರದಿಯ ಆಧಾರದಲ್ಲಿಯೇ ಸರಕಾರದ ಪ್ರಯತ್ನದ ಫಲವಾಗಿ ಹೈಕೋರ್ಟ್ ಹಲವಾರು ಷರತ್ತುಗಳೊಂದಿಗೆ ಕಂಬಳ ನಡೆಸಲು ಕಳೆದ ವರ್ಷ ಅನುಮತಿಸಿದ್ದರೂ ನಂತರ ಮತ್ತೆ ಅದಕ್ಕೆ ನಿಷೇಧ ಹೇರಲಾಗಿದೆ.

ಇದೀಗ ಎಲ್ಲರ ಚಿತ್ತ ಜನವರಿ 30ರಂದು ಹೈಕೋರ್ಟ್ ಕಂಬಳದ ವಿಚಾರದಲ್ಲಿ ನೀಡುವ ತೀರ್ಪಿನ ಮೇಲೆ ನೆಟ್ಟಿದ್ದರೂ ದಕ್ಷಿಣ ಕನ್ನಡದಲ್ಲಿ ಕಂಬಳ ಆಯೋಜಕರು ಜನವರಿ 28ರಂದು ಶಾಂತಿಯುತ ಪ್ರತಿಭಟನೆ  ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕನಿಷ್ಠ 20 ಕಂಬಳಗಳು ವಿವಿಧ ಸಮಿತಿಗಳ ಮುಂದಾಳತ್ವದಲ್ಲಿ ಭಾರೀ ಜನಬೆಂಬಲದೊಂದಿಗೆ ಹಲವಾರು ವರ್ಷಗಳಿಂದ  ನಡೆಯುತ್ತಿದ್ದು ಈ ಕ್ರೀಡೆಗೆ  ಜಿಲ್ಲೆಯ ಇತಿಹಾಸದಲ್ಲಿ ತನ್ನದೇ ಆದ ಮಹತ್ವವಿದೆ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.