ಶಶಿಕಲಾ ಪ್ರಕರಣ ತೀರ್ಪು ರಾಜಕೀಯ ಭ್ರಷ್ಟಾಚಾರ ನಿಯಂತ್ರಿಸುವುದೇ ?

ನ್ಯಾಯವಾದಿ ಬಿ ವಿ ಆಚಾರ್ಯ

ಶಶಿಕಲಾ ಪ್ರಕರಣ ತೀರ್ಪು ರಾಜಕೀಯ ಭ್ರಷ್ಟಾಚಾರ ನಿಯಂತ್ರಿಸುವುದೇ ?


ಈ ಪ್ರಕರಣದ ವಿಚಾರಣೆಯುದ್ದಕ್ಕೂ ಹಲವು ಹೀರೋಗಳು ಹೊರ ಹೊಮ್ಮಿದ್ದಾರೆ. ಮೊದಲನೆಯವರು  ಈ ಪ್ರಕರಣದ ತನಿಖೆಗಾಗಿ ನೇಮಕಗೊಂಡಿದ್ದ ವಿಶೇಷ ನ್ಯಾಯಾಧೀಶರಾದ  ಜಾನ್ ಮೈಖೇಲ್ ಡಿ’ಕುನ್ಹ. ಅಂತೆಯೇ ಈ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕರ್ನಾಟಕ ಸರಕಾರದಿಂದ ನೇಮಿಸಲ್ಪಟ್ಟ ಬಿ ವಿ ಆಚಾರ್ಯ ಅವರನ್ನು ಎಷ್ಟೇ ಹೊಗಳಿದರೂ ಸಾಕಾಗದು.


  • ಕೆ ಎನ್ ಭಟ್, ಸುಪ್ರೀಂ ಕೋರ್ಟಿನ ಹಿರಿಯ ವಕೀಲರು

ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಪ್ರಮುಖ ಆರೋಪಿಯಾಗಿದ್ದ ಅಕ್ರಮ ಆಸ್ತಿ ಪ್ರಕರಣವೊಂದು  ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ತನ್ನ ಬಲಿ ಪಡೆದುಕೊಂಡಿದೆ. ಈ ಕ್ಲೈಮಾಕ್ಸ್  ಅತ್ಯಂತ ರೋಚಕವಾಗಿತ್ತು ಹಾಗೂ ಅದರ ಭಾಗವಾಗಿ ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಯೇರುವ ಕನಸು ಕಂಡಿದ್ದ ಶಶಿಕಲಾ ಜೈಲು ಪಾಲಾಗಿದ್ದಾರೆ. ಕೆಲವರು ಆಕೆಯನ್ನು ದುರಂತ ನಾಯಕಿಗೆ ಹೋಲಿಸಿದರೆ ಇನ್ನು ಕೆಲವರು ಖಳನಾಯಕಿಯೊಬ್ಬಳಿಗೆ ತಕ್ಕ ಶಿಕ್ಷೆಯಾಗಿದೆ ಎಂದೇ ಅಂದುಕೊಂಡಿದ್ದಾರೆ.

ಈ ಪ್ರಕರಣದ ವಿಚಾರಣೆಯುದ್ದಕ್ಕೂ ಹಲವು ಹೀರೋಗಳು ಹೊರ ಹೊಮ್ಮಿದ್ದಾರೆ. ಮೊದಲನೆಯವರು  ಈ ಪ್ರಕರಣದ ತನಿಖೆಗಾಗಿ ನೇಮಕಗೊಂಡಿದ್ದ ವಿಶೇಷ ನ್ಯಾಯಾಧೀಶರಾದ  ಜಾನ್ ಮೈಖೇಲ್ ಡಿ’ಕುನ್ಹ.  ಜಯಲಲಿತಾ, ಶಶಿಕಲಾ ಹಾಗೂ ಇತರ ಇಬ್ಬರನ್ನು  ಈ ಅಕ್ರಮ ಆಸ್ತಿ ಪ್ರಕರಣದಲ್ಲಿ ದೋಷಿಗಳೆಂದು ಘೋಷಿಸಿ 2014ರಲ್ಲಿ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದವರಿವರು. ಇದೀಗ ಅವರು ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶರಾಗದ್ದಾರೆ.

ಜಡ್ಜ್ ಜಾನ್ ಮೈಖೆಲ್ ಡಿ'ಕುನ್ಹಾ
ಜಡ್ಜ್ ಜಾನ್ ಮೈಖೆಲ್ ಡಿ’ಕುನ್ಹಾ

ಅಂತೆಯೇ ಈ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕರ್ನಾಟಕ ಸರಕಾರದಿಂದ ನೇಮಿಸಲ್ಪಟ್ಟ ಬಿ ವಿ ಆಚಾರ್ಯ ಅವರನ್ನು ಎಷ್ಟೇ ಹೊಗಳಿದರೂ ಸಾಕಾಗದು. “ಪ್ರಾಮಾಣಿಕ ವಕೀಲ” ಎಂಬ ಶಬ್ದ ಕೇವಲ ಕಾಲ್ಪನಿಕವಲ್ಲ, ಅಂಥವರೂ ಇದ್ದಾರೆ ಎಂದು ಅವರು ಸಾಬೀತುಪಡಿಸಿದ್ದಾರೆ.

ಕಳೆದೆರಡು ವಾರಗಳ ಅವಧಿಯಲ್ಲಿ ತಮಿಳುನಾಡಿನ ರಾಜ್ಯಪಾಲರೂ ಸಾಕಷ್ಟು ಒತ್ತಡ ಅನುಭವಿಸಿದ್ದಾರೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಶಿಕಲಾ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅವರು ಆಹ್ವಾನ ನೀಡದೆ ವಿಳಂಬ ನೀತಿ ಅನುಸರಿಸಿದ್ದರು  ಎಂಬ ಆಪಾಧನೆ ಎದುರಿಸಬೇಕಾಗಿ ಬಂದಿತ್ತು.

ಆದರೂ ಅವರು ಸರಿಯಾದ ಕ್ರಮವನ್ನೇ ಕೈಗೊಂಡಿದ್ದಾರೆಂಬುದು ಈಗ ಸ್ಪಷ್ಟ. ಅವರೇನಾದರೂ ಶಶಿಕಲಾರಿಗೆ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದ್ದೇ ಆಗಿದ್ದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೂರೇ ದಿನಗಳಲ್ಲಿ ಶಶಿಕಲಾ ಜೈಲಿಗೆ ಹೋಗುವ ಪ್ರಮೇಯ ಬರುತ್ತಿತ್ತಲ್ಲದೆ ಇದು ಪರಿಸ್ಥಿತಿಯನ್ನು ಖಂಡಿತವಾಗಿಯೂ ಮತ್ತಷ್ಟು ಗೋಜಲುಗೊಳಿಸುತ್ತಿತ್ತು.

ಶಶಿಕಲಾ ಅವರ ತಲೆಯ ಮೇಲೆ ತೂಗುತ್ತಿದ್ದ ಅಕ್ರಮ ಆಸ್ತಿ ಪ್ರಕರಣದ ಕತ್ತಿಯೇ ರಾಜ್ಯಪಾಲರು ವಿಳಂಬ ನೀತಿ ಅನುಸರಿಸಲು ಕಾರಣವಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಆಕೆ 2027ರ ತನಕ ಚುನಾವಣೆ ಸ್ಪರ್ಧಿಸುವ ಹಾಗಿಲ್ಲ.

ಜಯಲಲಿತಾ ಅವರು ಸಾಂಗತ್ಯ ದೋಷದಿಂದಾಗಿ ತಪ್ಪಿತಸ್ಥರಾಗಿದ್ದರೆಂದು ಹೇಳುವ ಅವರ ಅನೇಕ ಅಭಿಮಾನಿಗಳು ಈಗಲೂ ಇದ್ದಾರೆ. ಆದರೆ ಸುಪ್ರೀಂ ಕೋರ್ಟ್ ಇದನ್ನು ಅಲ್ಲಗಳೆದಿದೆ. ಏನೇ ಇರಲಿ, ಈ ತೀರ್ಪು ನಿರೀಕ್ಷಿಸಿದಂತೆ ಆಗಸ್ಟ್-ಸೆಪ್ಟೆಂಬರ್ 2016ರಲ್ಲಿಯೇ ಹೊರಬೀಳುತ್ತಿದ್ದರೆ, ಜಯಲಲಿತಾ ಅವರಿಗೆ  ರಾಣಿಯಂತಹ ಅಂತಿಮ ಯಾತ್ರೆ  ದೊರೆಯುತ್ತಿರಲಿಲ್ಲ.  ಜಯಲಲಿತಾ ಅವರಿಗೆ ಭಾರತ ರತ್ನ ನೀಡಬೇಕೆಂಬ ಕೂಗು ಈ ತೀರ್ಪಿನೊಂದಿಗೆಯೇ ಸಾಯುತ್ತದೆ.

ಶಶಿಕಲಾ ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆ ಪುನರ್ ಪರಿಶೀಲನಾ ಅಪೀಲು ಸಲ್ಲಿಸಬಹುದೆಂದು ಹೇಳಲಾಗುತ್ತಿದ್ದರೂ ಅದು ಕೇವಲ ಸೈದ್ಧಾಂತಿಕ ಪರಿಹಾರೋಪಾಯವಷ್ಟೇ. ಆರು ತಿಂಗಳುಗಳಿಗೂ ಹೆಚ್ಚು ಕಾಲ ಪರಾಮರ್ಶಿಸಿ ನೀಡಲಾದ ಈ ತೀರ್ಪಿನಲ್ಲಿ ತಪ್ಪು ಇರುವ ಸಾಧ್ಯತೆಯಿಲ್ಲ. ಹಾಗೇನಾದರೂ ಇದ್ದಲ್ಲಿ ಮಾತ್ರ ಪುನರ್ ಪರಿಶೀಲನಾ ಅರ್ಜಿಯನ್ನು ಸ್ವೀಕರಿಸುವ ಸಾಧ್ಯತೆಯಿದೆ.

ರಾಜಕೀಯ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಈ ಶಶಿಕಲಾ ಪ್ರಕರಣದ ತೀರ್ಪು ಪರಿಣಾಮಕಾರಿಯಾಗಬಹುದೆಂದು ನನಗನಿಸುತ್ತಿಲ್ಲ. ಮಹಾಭಾರತದಲ್ಲಿನ  ಘಟನೆಯೊಂದು ನಮಗೆ ತಿಳಿಸುವಂತೆ “ನಾವು ಪ್ರತಿ ದಿನ ಜನರು ಸಾಯುವುದನ್ನು ನೋಡುತ್ತೇವೆ, ಆದರೂ ಉಳಿದವರಾದ ನಾವು ಅಜರಾಮರರಾಗುವ ನಿರೀಕ್ಷೆ ಇಟ್ಟುಕೊಳ್ಳುತ್ತೇವೆ. ಇದಕ್ಕಿಂತ ಹೆಚ್ಚಿನ ಆಶ್ಚರ್ಯವೇನಿದೆ?”

ರಾಜಕಾರಣಿಗಳಂತೂ ಈ ತೀರ್ಪನ್ನು ತೀರಾ ಸೂಕ್ಷ್ಮವಾಗಿ ಗಮನಿಸಿ ಶಶಿಕಲಾ ಅವರು ಸಿಕ್ಕಿ ಬೀಳಲು ಕಾರಣವಾದ  ಅಂಶಗಳನ್ನು ಗುರುತಿಸಿ ಅಂತಹವುಗಳಿಂದ ತಾವು ಮುಂದೆ ದೂರವಿರಲು ಯತ್ನಿಸುತ್ತಾರೆಯೇ ವಿನಹ ಭ್ರಷ್ಟಾಚಾರದಿಂದಲ್ಲ.