ರೂಪಕ್ ಕುಮಾರ್ ದತ್ತ ಸಿಬಿಐ ಹೊಸ ನಿರ್ದೇಶಕ ?

ರೂಪಕ್ ಕುಮಾರ್ ದತ್ತ

ಬೆಂಗಳೂರು : ದಿಲ್ಲಿಯಲ್ಲಿ ನವಂಬರ್ 28ರಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂದಿನ ನಿರ್ದೇಶಕರ ಆಯ್ಕೆ ನಿರ್ಧಾರವಾಗಲಿದೆ. ಎರಡು ವರ್ಷ ಅಧಿಕಾರ ನಡೆಸಿರುವ ಡಿಸೆಂಬರ್ 2ರಂದು ಪ್ರಸಕ್ತ ಸಿಬಿಐ ನಿರ್ದೇಶಕ ಅನಿಲ್ ಸಿನ್ಹಾ ನಿವೃತ್ತಿ ಹೊಂದಲಿದ್ದಾರೆ.

ಹೊಸ ಸಿಬಿಐ ನಿರ್ದೇಶಕರಾಗಿ ಕರ್ನಾಟಕದ 1981ರ ಬ್ಯಾಚಿನ ಅಧಿಕಾರಿ ರೂಪಕ್ ಕುಮಾರ್ ದತ್ತ ನಿಯುಕ್ತಿಯಾಗುವ ಸಾಧ್ಯತೆ ಹೆಚ್ಚಿದೆ. ಇವರು ಕಳೆದ ವರ್ಷ ಜುಲೈಯಲ್ಲಿ ಸಿಬಿಐ ವಿಶೇಷ ನಿರ್ದೇಶಕರಾಗಿ ಭಡ್ತಿ ಹೊಂದಿದ್ದರು. ಸಿಬಿಐಯ ಹೆಚ್ಚುವರಿ ನಿರ್ದೇಶಕ ಹುದ್ದೆ ನಿರ್ವಹಿಸಿರುವ ಇವರು ಭ್ರಷ್ಟಾಚಾರ ವಿರೋಧಿ ವಲಯದ (ಎಚ್‍ಕ್ಯೂ) ಅಧಿಕಾರಿಯೂ ಆಗಿದ್ದರು. ಆದಾಗ್ಯೂ ಇವರಿಗೆ ಇಂಡೋ-ಟಿಬೇಟಿಯನ್ ಗಡಿ ಪೊಲೀಸ್ ಡೀಜಿ ಕೃಷ್ಣ ಚೌಧರಿ ಸ್ಪರ್ಧೆ ನೀಡುವ ಸಂಭವವವಿದೆ. ಇವರು ಬಿಹಾರ ಕೇಡರಿನ 1979ರ ಬ್ಯಾಚಿನ ಐಪಿಎಸ್ ಅಧಿಕಾರಿ.

ಸುಪ್ರೀಂ ಕೋರ್ಟಿನ ಮುಖ್ಯ ನಾಯಾಧೀಶ ಮತ್ತು ವಿಪಕ್ಷ ನಾಯಕರೊಬ್ಬರನ್ನೊಗೊಂಡಿರುವ ಪ್ರಧಾನಿ ಅಧ್ಯಕ್ಷತೆಯ ಆಯ್ಕೆ ಸಮಿತಿಯು ದತ್ತರತ್ತ ಹೆಚ್ಚು ಒಲವು ತೋರಿಸುವ ಸಾಧ್ಯತೆ ಕಂಡು ಬಂದಿದೆ. “ಹೊಸ ಸಿಬಿಐ ನಿರ್ದೇಶಕ ನಿಯುಕ್ತಿಯೊಂದಿಗೆ ಕರ್ನಾಟಕ ರಾಜ್ಯದ ಹೊಸ ಡಿಜಿ-ಐಜಿಪಿ ಆಯ್ಕೆ ಭವಿಷ್ಯವೂ ಅಡಗಿದೆ” ಎಂದು ವಿಶ್ವಸನೀಯ ಮೂಲವೊಂದು ಹೇಳಿದೆ.