ಅರ್ಧದಲ್ಲೇ ಬಿದ್ದು ಹೋಗಲಿದೆಯೇ ಮೋದಿ ಕೋಟಿ ವಸತಿ ಯೋಜನೆ ?

ಪ್ರಧಾನಮಂತ್ರಿ ಮೋದಿ ಸರ್ಕಾರ 2022ರೊಳಗೆ ಎಲ್ಲರಿಗೂ ಪಿ ಎಂ ವಸತಿ ಯೋಜನೆಯಡಿ ಎರಡು ಕೋಟಿ ಮನೆ ನಿರ್ಮಿಸಿ ಕೊಡುವ ಗುರಿ ಹೊಂದಿದೆ. ಆದರೆ ಮೋದಿ ಸರ್ಕಾರ ಈ ಭರವಸೆ ಪೂರೈಸಲು ಸಮರ್ಥವಾಗಿಯೇ ? ಅಥವಾ ಇದು ಹೇಳಿದಷ್ಟು ಸುಲಭದ ಮಾತೇ ?

2014ರ ಚುನಾವಣೆ ವೇಳೆ ಯುಪಿಎ-2 ಸರ್ಕಾರದ ಆರ್ಥಿಕ ನೀತಿ ವಿರುದ್ಧ ಬಿಜೆಪಿ ಕಟು ಟೀಕೆ ವ್ಯಕ್ತಪಡಿಸಿತ್ತು. ದೇಶದ ಆರ್ಥಿಕತೆ ವೃದ್ಧಿ ಮತ್ತು ಯುವಜನಾಂಗಕ್ಕೆ ಉದ್ಯೋಗ ಕಲ್ಪಿಸುವುದಾಗಿ ಮೋದಿ ತನ್ನೆಲ್ಲ ಭಾಷಣಗಳಲ್ಲಿ ಭರವಸೆ ನೀಡಿದ್ದರು.

ಬಿಜೆಪಿ ಬಹುಮತದಿಂದ ಗೆದ್ದು ಬಂದ ಬಳಿಕ ಮೋದಿ ಸರ್ಕಾರ ಕೆಲವು ಮಹತ್ವಾಕಾಂಕ್ಷಿ ಯೋಜನೆ ಪ್ರಕಟಿಸಿದೆ. ಇವುಗಳಲ್ಲಿ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು 2022ರೊಳಗೆ ಎಲ್ಲರಿಗೂ ಮನೆ ನಿರ್ಮಿಸಿಕೊಡುವ ಯೋಜನೆಗಳು ಒಳಗೊಂಡಿವೆ.

ಜೋಪಡಿ ನಿವಾಸಿಗರ ಜೊತೆಗೆ 20 ಲಕ್ಷ ಬಡವರಿಗೂ ಈ ಯೋಜನೆ ಲಾಭ ತಲುಪಿಸಲು ಹಾಗೂ 2015ರಿಂದ 2022ರೊಳಗೆ ಯೋಜನೆ ಪೂರ್ಣಗೊಳಿಸಲು ಸರ್ಕಾರ ಗುರಿ ಹೊಂದಿದೆ. ಯೋಜನೆ ಹೀಗಿದೆ.

  1. ಖಾಸಗಿ ವಲಯದ ತೆರಿಗೆಯಿಂದ ಜೋಪಡಿಯಲ್ಲಿ ವಾಸಿಸುವವರಿಗೆ ದಿನದ 24 ತಾಸು ನೀರು, ವಿದ್ಯುತ್ ಮತ್ತು ಸ್ವಚ್ಛತಾ ಸವಲತ್ತು ಹೊಂದಿದ ಮನೆ ನಿರ್ಮಿಸಲಾಗುವುದು.
  2. ವಾರ್ಷಿಕ ಮೂರು ಲಕ್ಷಕ್ಕಿಂತ ಅಧಿಕ ಆದಾಯವಿಲ್ಲದವರು, ಹಿಂದುಳಿದ ಆದಾಯ ವರ್ಗದವರು (ಆರು ಲಕ್ಷಕ್ಕಿಂತ ಅಧಿಕವಿಲ್ಲದ) ಮತ್ತು ಮಧ್ಯಮ ವರ್ಗದವರಿಗೆ ಮನೆ ನಿರ್ಮಿಸಿಕೊಳ್ಳಲು ಅಥವಾ ಹಳೆ ಮನೆ ದುರಸ್ತಿಗೆ ಅನುಕೂಲವಾಗುವಂತೆ ಸಾಲಕ್ಕೆ ಸಬ್ಸಿಡಿ ನೀಡಲಾಗುವುದು.
  3. ಕಡಿಮೆ ಆದಾಯ ವರ್ಗದವರಿಗೆ ಮನೆ ನಿರ್ಮಿಸಲು 1.50 ಲಕ್ಷ ರೂ ನೆರವು ನೀಡಲಾಗುವುದು.

ಈ ಯೋಜನೆಯಿಂದ ಮೋದಿಗೆ ಈಗಾಗಲೇ ಕೈಸುಟ್ಟುಕೊಂಡ ಅನುಭವವಾಗಿದೆ. ಎಲ್ಲ ಪ್ರಯತ್ನಗಳ ಹೊರತಾಗಿಯೂ ದೇಶದ ಹಣಕಾಸು ವ್ಯವಸ್ಥೆ ಮತ್ತು ರಿಯಲ್ ಎಸ್ಟೇಟ್ ಕುಸಿತದಿಂದ ಕುಂಟುತ್ತ ಸಾಗುತ್ತಿರುವ ಪಿ ಎಂ ವಸತಿ ಯೋಜನೆ ಅರ್ಧದಲ್ಲೇ ಬಿದ್ದು ಹೋದರೂ ಅಚ್ಚರಿ ಪಡಬೇಕಿಲ್ಲ.