`ರಾಜಕೀಯ ಸೇರುವುದಿಲ್ಲ’

“ಅಭಿಮಾನಿ ಎಂಬ ಮಾತ್ರಕ್ಕೆ ನಾವು ಮತ ಚಲಾಯಿಸದೆ, ಜವಾಬ್ದಾರಿಯುತ ನಾಗರಿಕರೆಂದು ಭಾವಿಸಿ ಮತ ಚಲಾಯಿಸಬೇಕು” ಎಂದು ಪ್ರಕಾಶ್ ರೈ ಹೇಳುತ್ತಾರೆ.

ಬೆಂಗಳೂರು : ಸ್ನೇಹಿತೆ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಳಿಕ ಸಂಭ್ರಮಿಸಿದವರ ವಿರುದ್ಧ ಧ್ವನಿ ಎತ್ತಿರುವ ನಟ ಪ್ರಕಾಶ್ ರೈ, ತಾನು ರಾಜಕೀಯ ಸೇರುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರೈ, “ನಾನು ರಾಜಕೀಯ ಸೇರುವುದಿಲ್ಲ. ಜನಪ್ರಿಯರಾದ ಮಾತ್ರಕ್ಕೆ ನಟರು ರಾಜಕೀಯ ಸೇರಿಕೊಳ್ಳಬೇಕೆಂದು ಯೋಚಿಸಿದವ ನಾನಲ್ಲ. ಅದು ದುರಂತವೇ ಸರಿ. ರಾಜಕೀಯ ಸೇರುವವರು ದೇಶ ಎದುರಿಸುತ್ತಿರುವ ವಿಷಯಗಳ ಬಗ್ಗೆ ಸ್ಪಷ್ಟ ಅರಿವು ಇಟ್ಟುಕೊಳ್ಳಬೇಕು ಮತ್ತು ಜನರ ವಿಶ್ವಾಸ ಗಳಿಸಬೇಕು” ಎಂದರು.

“ಅಭಿಮಾನಿ ಎಂಬ ಮಾತ್ರಕ್ಕೆ ನಾವು ಮತ ಚಲಾಯಿಸದೆ, ಜವಾಬ್ದಾರಿಯುತ ನಾಗರಿಕರೆಂದು ಭಾವಿಸಿ ಮತ ಚಲಾಯಿಸಬೇಕು” ಎಂದವರು ಹೇಳಿದರು.

ಚಿತ್ರರಂಗದಲ್ಲಿ ಜನಪ್ರಿಯ ಹೊಂದಿದ ಕೆಲವು ನಟರು ರಾಜಕೀಯ ಸೇರಿಕೊಳ್ಳುವ ಇರಾದೆ ವ್ಯಕ್ತಪಡಿಸುತ್ತಾರೆ. ಈ ನಿಟ್ಟಿನಲ್ಲಿ ರಾಜ್ ತನ್ನ ನಿಲುವು ಸ್ಪಷ್ಟಪಡಿಸಿದರು. ಅತ್ತ ರಜನೀಕಾಂತ್ ರಾಜಕೀಯ ಸೇರಿಕೊಳ್ಳುವ ವದಂತಿ ಕೆಲವು ತಿಂಗಳಿಂದ ಕೇಳಿ ಬರುತ್ತಿದ್ದರೆ, ಇತ್ತ, ನಟ ಕಮಲಹಾಸನ್ ಶೀಘ್ರ ರಾಜಕೀಯ ಪ್ರವೇಶಿಸುವೆ ಎಂದಿದ್ದಾರೆ.

ನೋಟು ಅಮಾನ್ಯೀಕರಣ ವಿಷಯದಲ್ಲಿ ರಾಜ್ ಟ್ವಿಟ್ಟರಿನಲ್ಲಿ, “ಶ್ರೀಮಂತರು ಕಪ್ಪು ಹಣವನ್ನು ಹೊಳೆಯುವ ನೋಟಾಗಿಸಿದ್ದಾರೆ. ನೋಟು ನಿಷೇಧದಿಂದ ಕೋಟ್ಯಂತರ ಮಂದಿ ನೊಂದುಕೊಳ್ಳುವಂತಾಗಿದೆ. ದುಡಿಯುವ ವರ್ಗದವರ ಗೋಳು ಹೇಳತೀರದು. ಇದು ನಮ್ಮ ಕಾಲದ ದೊಡ್ಡ ತಪ್ಪೆಂದು ತಿಳಿದ ಮೇಲೂ, ಇದಕ್ಕೆ ಕ್ಷಮೆ ಕೇಳದಿರುವುದು ಸರಿಯೇ” ಎಂದು ಪ್ರಶ್ನಿಸಿದ್ದರು.

ಗೌರಿ ಲಂಕೇಶ್ ಹಂತಕರನ್ನು ಬೆಂಬಲಿಸುವವರ ವಿಷಯದಲ್ಲಿ ಪ್ರಧಾನಿ ಮೋದಿ ಕಣ್ಮುಚ್ಚಿ ಕೂತಿದ್ದಾರೆ ಎಂದು ರೈ ಅಕ್ಟೋಬರಿನಲ್ಲಿ ಮತ್ತೊಂದು ವಿವಾದಾಸ್ಪದ ಹೇಳಿಕೆ ನೀಡಿದ್ದರು.

“ಉತ್ತರ ಪ್ರದೇಶದಲ್ಲಿ ಒಬ್ಬ ಸೀಎಂ ಇದ್ದಾರೆಯೇ ಅಥವಾ ಆತ ದೇವಸ್ಥಾನದ ಅರ್ಚಕರೋ ಎಂಬುದು ಗೊತ್ತಾಗುತ್ತಿಲ್ಲ. ನಾನು ಐದು ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದು, ಅವರ ನಟನಾ ಕೌಶಲ್ಯಕ್ಕೆ ಅವೆಲ್ಲವನ್ನೂ ಅವರಿಗೆ ನೀಡಬೇಕೆಂದುಕೊಂಡಿದ್ದೇನೆ” ಎಂದರು.