ಪ್ರತಿಭಟನೆಗೆ ಹೆದರಲ್ಲ : ಪ್ರಕಾಶ್ ರೈ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : 11ಈ ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದ್ದೇ ಇದೆ. ಅದೇ ಕಾರಣಕ್ಕೆ ಬಿಜೆಪಿ ಹಾಗೂ ಅದರ ಪರಿವಾರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ” ಎಂದು ಬಹುಭಾಷಾ ನಟ ಪ್ರಕಾಶ್ ರೈ ಅಭಿಪ್ರಾಯಪಟ್ಟಿದ್ದಾರೆ.

ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲೆಂದು ಆಗಮಿಸಿದ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಈ ರೀತಿ ಉತ್ತರಿಸಿದರು.

“ನನ್ನನ್ನು ಪ್ರೀತಿಸುವವರು ಪ್ರೀತಿಸುತ್ತಾರೆ. ಇನ್ನು ಕೆಲವರು ವಿನಾಕಾರಣ ದ್ವೇಷಿಸುತ್ತಾರೆ. ಎಲ್ಲವನ್ನೂ ಜನ ನಿರ್ಧಾರ ಮಾಡುತ್ತಾರೆ” ಎಂದರು. ಅಲ್ಲದೆ ಮುಂದಿನ ಪ್ರಶ್ನೆಗೆ ಕಾಯದೇ ನೇರವಾಗಿ ಹೊರಟುಬಿಟ್ಟರು. ಇನ್ನು ಕೂಳೂರಿಗೆ ಆಗಮಿಸಿದ ವೇಳೆ ಡಿವೈಎಫೈ ಕಾರ್ಯಕರ್ತರು ಪ್ರಕಾಶ್ ರೈಯನ್ನು ಅದ್ದೂರಿಯಾಗಿ ಸ್ವಾಗತಿಸಿದರು. “ನಾನು ಪ್ರತಿಭಟನೆಗೆ ಯಾವತ್ತೂ ಹೆದರುವುದಿಲ್ಲ. ಶಿವರಾಮ ಕಾರಂತರು ನನ್ನ ಅಜ್ಜ. ನನಗೆ ಆತ್ಮೀಯರಾಗಿದ್ದರು. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುವುದು ನನಗೆ ಹೆಮ್ಮೆ ಇದೆ” ಎಂದರು.

ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನನಗಿಂತ ಒಳ್ಳೆಯ ನಟ ಎಂದು ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಪ್ರಕಾಶ್ ರೈ ಟೀಕಿಸಿದ್ದರು. ಇದೇ ವಿಚಾರಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳು ಪ್ರಕಾಶಗೆ ಈ ಪ್ರಶಸ್ತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಮಂಗಳೂರಿಗೆ ಆಗಮಿಸಿದ ಪ್ರಕಾಶ್ ರೈಗೆ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.