ಆರೆಸ್ಸೆಸ್ಸಿನ ಎರಡನೇ ಅತ್ಯುನ್ನತ ಹುದ್ದೆಗೆ ಏರಲಿದ್ದಾರೆಯೇ ಮೋದಿ ಆಪ್ತ ಹೊಸಬಾಳೆ ?

ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಹತ್ತು ತಿಂಗಳುಗಳ ನಂತರ-ಮಾರ್ಚ್ 2015ರಲ್ಲಿ ಅವರ ಸಮೀಪವರ್ತಿಯೆಂದೇ ಹೇಳಲಾದ ಹಿರಿಯ ಆರೆಸ್ಸೆಸ್ ನಾಯಕ ದತ್ತಾತ್ರೇಯ ಹೊಸಬಾಳೆ ಅವರನ್ನು ಆರೆಸ್ಸೆಸ್ಸಿನ ಎರಡನೇ ಅತ್ಯುನ್ನತ ಹುದ್ದೆಯಾದ ರಾಷ್ಟ್ರೀಯ ಸಹಕಾರ್ಯವಾಹ ಹುದ್ದೆಗೆ ತರಲು ಪ್ರಯತ್ನಗಳು ನಡೆದಿತ್ತಾದರೂ ಆ ಹುದ್ದೆಯನ್ನು ಹೊಂದಿದ್ದ ಸುರೇಶ್ ರಾವ್ ಜೋಷಿ (ಭಯ್ಯಾಜಿ ಜೋಶಿ) ಎರಡನೇ ಅವಧಿಗೆ ಮತ್ತೆ ಆಯ್ಕೆಯಾಗಿದ್ದರು. ಎರಡೂವರೆ ವರ್ಷಗಳ ನಂತರ, ಇದೀಗ ಅಕ್ಟೋಬರ್ ತಿಂಗಳಲ್ಲಿ ಆರೆಸ್ಸೆಸ್ಸಿನ ಕೇಂದ್ರೀಯ ಕಾರ್ಯಕಾರಿ ಮಂಡಳಿ ಸಭೆಗೆ ಪೂರ್ವಭಾವಿಯಾಗಿ ಮತ್ತೆ ಹೊಸಬಾಳೆಯವರನ್ನು ಸಹಕಾರ್ಯವಾಹ ಹುದ್ದೆಗೇರಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.

ತಾಂತ್ರಿಕವಾಗಿ ಸಂಘದ ನೇತೃತ್ವವನ್ನು ಮೋಹನ್ ಭಾಗ್ವತ್ ಅವರು ಸರಸಂಘಚಾಲಕರಾಗಿ ವಹಿಸಿದ್ದರೂ ವಾಸ್ತವವಾಗಿ  ಸಹಕಾರ್ಯವಾಹ ಅವರೇ ಸಂಘಟನೆಯ ಕಾರ್ಯನಿರ್ವಹಣೆಯ ಮೇಲೆ ನಿಯಂತ್ರಣ ಹೊಂದಿದವರಾಗಿದ್ದಾರೆ.

ಪ್ರಸಕ್ತ ಹೊಸಬಾಳೆ ಅವರು ಆರೆಸ್ಸೆಸ್ಸಿನ ಜಂಟಿ ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರಾಗಿದ್ದಾರೆ. ಆಂಗ್ಲ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವೀಧರರಾದ ಅವರು ಆರೆಸ್ಸೆಸ್ ಪದಾಧಿಕಾರಿಯಾಗುವ ಮುನ್ನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಜತೆ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮೋದಿ ಪ್ರಧಾನಿಯಾದಂದಿನಿಂದ ಹೊಸಬಾಳೆ ಕೂಡ ಸಂಘದಲ್ಲಿ ತಮ್ಮ ಪ್ರಾಬಲ್ಯವನ್ನು ಬೆಳೆಸಿಕೊಂಡು ಹೋಗಿದ್ದಾರೆ. ಪ್ರಸಕ್ತ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಭಯ್ಯಾಜಿ ಸ್ಥಾನಕ್ಕೆ ಹೊಸಬಾಳೆ ಅವರ ನೇಮಕವಾಗಿದ್ದೇ ಆದಲ್ಲಿ ಮೋದಿ ಅವರಿಗೆ ನೀಡುವ ಬೆಂಬಲ ಬಹಳಷ್ಟು ವ್ಯತ್ಯಾಸ ಮಾಡಲಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

ಮೋಹನ್ ಭಾಗ್ವತ್ ಅವರು ಹೊಸಬಾಳೆ ನೇಮಕಕ್ಕೆ ಸಹಮತ ಹೊಂದಿದ್ದಾರಾದರೂ ಭಯ್ಯಾಜಿ ಜೋಷಿ ಮಾತ್ರ ತಮ್ಮ ನಿಲುವನ್ನು ಇಲ್ಲಿಯ ತನಕ ಸ್ಪಷ್ಟಪಡಿಸಿಲ್ಲ. ಮೂಲಗಳ ಪ್ರಕಾರ ಬಿಜೆಪಿ ಕಾರ್ಯಚಟುವಟಿಕೆಗಳಲ್ಲಿ ಅಷ್ಟೊಂದೇನೂ ಆಸಕ್ತಿ ವಹಿಸದೇ ಇರುವ ಭಯ್ಯಾಜಿ ಜೋಷಿ ಸ್ಥಾನಕ್ಕೆ ಹೊಸಬಾಳೆ ನೇಮಕವಾಗಿದ್ದೇ ಆದಲ್ಲಿ ಸಂಘದ ನಿರ್ಧಾರಗಳ ಮೇಲೆ ಪ್ರಧಾನಿ ಪ್ರಭಾವ ಬೀರುವ ಸಾಧ್ಯತೆಯಿದೆಯೆನ್ನಲಾಗುತ್ತಿದೆ. ಹೊಸಬಾಳೆಯನ್ನು ಈ ಪ್ರಮುಖ ಹುದ್ದೆಗೆ ತರುವಲ್ಲಿ ಮೋದಿ ಸಫಲರಾದ ಪಕ್ಷದಲ್ಲಿ ಆರೆಸ್ಸೆಸ್-ಬಿಜೆಪಿ ನಡುವಿನ ಸಂಬಂಧದಲ್ಲಿ ಇದು ಹೊಸ ಶಕೆಯನ್ನು ಆರಂಭಿಸಬಹುದು ಎನ್ನುತ್ತವೆ ಕೆಲ ಆಂತರಿಕ ಮೂಲಗಳು.=