ಇನ್ನೊಂದು ಬಳ್ಳಾರಿಯಾಗುವುದೇ ಗದಗದ ಕಪ್ಪತಗುಡ್ಡ

ಕಪ್ಪತಗುಡ್ಡ

ಗದಗ ಜಿಲ್ಲೆಯಲ್ಲಿ ದಿನಕ್ಕೆ 1000 ಟನ್ ಚಿನ್ನದ ಅದಿರು ತೆಗೆಯುವ ಸಾಮಥ್ರ್ಯವಿರುವ ಘಟಕ ತೆರೆಯಲು ಅನುಮತಿಸಲಾಗಿದೆಯೆಂದು ಕಂಪೆನಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ದಕ್ಷಿಣ ಆಫ್ರಿಕಾದ ಕಂಪೆನಿ ಟರ್ನ್ ಬೆರ್ರಿ ಸಹಾಯದೊಂದಿಗೆ ಈ ಘಟಕ ರೂ 300 ಕೋಟಿ ವೆಚ್ಚದಲ್ಲಿ ಅಸ್ತಿತ್ವಕ್ಕೆ ಬರಲಿದೆ.

ಗದಗ ಜಿಲ್ಲೆಯ ಕಪ್ಪತಗುಡ್ಡ ಒಂದು ಪ್ರಕೃತಿ ರಮಣೀಯ ಸ್ಥಳ. ಇಲ್ಲಿರುವ ಹಲವಾರು ದೇವಸ್ಥಾನಗಳು ಹಾಗೂ ಮಠಗಳಿಗೆ ಸುತ್ತಮುತ್ತಲಿನ ಸುಮಾರು 40 ಗ್ರಾಮಗಳ ಜನರು ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಅವರ ಭೇಟಿಯ ಉದ್ದೇಶ ಕೇವಲ ದೇವರ ದರ್ಶನವಲ್ಲ. ಈ ಬೆಟ್ಟ ಪ್ರದೇಶದಲ್ಲಿ ಹೇರಳವಾಗಿ ಬೆಳೆದಿರುವ ಹಾಗೂ ವಿವಿಧ ಕಾಯಿಲೆಗಳಿಗೆ ರಾಮಬಾಣವೆಂದೇ ತಿಳಿಯಲಾಧ ಔಷಧೀಯ ಸಸ್ಯಗಳನ್ನು ಅರ್ಚಕರಿಂದ ಪಡೆಯಲೂ ಜನರು ಸಾಲುಗಟ್ಟುತ್ತಾರೆ. ಈ ಕಪ್ಪತಗುಡ್ಡ ಕರ್ನಾಟಕದ ಪಾಲಿಗೆ ಅಮೂಲ್ಯ ಸಂಪತ್ತು ಎಂಬುದರಲ್ಲಿ ಎರಡು ಮಾತಿಲ್ಲ.
ಇಲ್ಲಿನ ಪ್ರಕೃತಿಯೊಂದಿಗೆ ಇಲ್ಲಿನ ಪ್ರತಿಯೊಂದು ಧಾರ್ಮಿಕ ಪ್ರಕ್ರಿಯಗೂ ಅವಿನಾಭಾವ ಸಂಬಂಧವಿದೆ. ಈ ಬೆಟ್ಟದಲ್ಲಿ ಸುಮಾರು 130 ಜಾತಿಯ ಔಷಧಿಯ ಸಸ್ಯಗಳಿವೆ ಎಂಬುದು ಒಂದು ಅಂದಾಜು. ಇಲ್ಲಿರುವ ಪುಣ್ಯ ಜಲವನ್ನು ಬೆಳೆಗಳಿಗೆ ಸಿಂಪಡಿಸಿದರೆ ಅವುಗಳಿಗೆ ಯಾವುದೇ ರೋಗ ಬಾಧಿಸದು ಎಂಬ ನಂಬಿಕೆಯಿದೆ ಎನ್ನುತ್ತಾರೆ ಕಪ್ಪಟ್ಟೇಶ್ವರ ದೇವಳದ ಮುಖ್ಯಸ್ಥ ಮಲ್ಲಿಕಾರ್ಜುನ ಸ್ವಾಮಿ.
ಇಲ್ಲಿನ ಜನರ ಆಶಯಕ್ಕೆ ತಕ್ಕಂತೆ ರಾಜ್ಯ ಸರಕಾರ ಡಿಸೆಂಬರ್ 19, 2015ರಂದು ಕಪ್ಪತಗುಡ್ಡವನ್ನು `ಸಂರಕ್ಷಿತ ವಲಯ’ ಎಂದು ಘೋಷಿಸಿತ್ತು. ಆದರೆ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ವನ್ಯಜೀವಿ ಮಂಡಳಿಯು ಕಳೆದ ವರ್ಷದ ನವೆಂಬರ್ 4ರಂದು ಮೇಲಿನ ಘೋಷಣೆಯನ್ನು ಹಿಂದೆಗೆದುಕೊಂಡು ಪರಿಸರವಾದಿಗಳ ಮತ್ತು ಧಾರ್ಮಿಕ ನಾಯಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು
ನಂತರದ ಬೆಳವಣಿಗೆಗಳಲ್ಲಿ ಗದಗ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮಿ ಹಾಗ ಅನ್ನದಾನೇಶ್ವರ ಮಹಾಶಿವಯೋಗಿ ಮಠದ ಅಭಿನವ ಅನ್ನದಾನೇಶ್ವರ ಸ್ವಾಮಿಯ ನೇತೃತ್ವದಲ್ಲಿ ಕಪ್ಪತಗುಡ್ಡ ಉಳಿಸಿ ಆಂದೋಲನವನ್ನೂ ಆರಂಭಿಸಿದ್ದರಲ್ಲದೆ ಬೆಟ್ಟ ಪ್ರದೇಶದಲ್ಲಿ ಕಬ್ಬಿಣ ಮತ್ತು ಚಿನ್ನದ ಅದಿರಿನ ನಿಕ್ಷೇಪವಿರುವುದರಿಂದ ಸರಕಾರ ಗಣಿ ಲಾಬಿಗೆ ಮಣಿದಿದೆಯೆಂದು ದೂರಿದ್ದರು.
ವಾಸ್ತವವಾಗಿ ಈ ಬೆಟ್ಟ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಚಿನ್ನದ ಅದಿರಿಗಾಗಿ ಹುಡುಕಾಟ ನಡೆಯುತ್ತಿದೆ. ಕೆಲವರು ಇದರಲ್ಲಿ ಯಶಸ್ವಿಯೂ ಆಗುತ್ತಿದ್ದು ಸ್ಥಳೀಯ ಚಿನ್ನ ಮಾರಾಟಗಾರರು ಶಿರಹಟ್ಟಿ ತಾಲೂಕಿಗೆ ಚಿನ್ನ ಖರೀದಿಸಲು ಹೋಗುವುದೂ ಉಂಟು. 20ನೇ ಶತಮಾನದ ಆರಂಭದಲ್ಲಿ ಧಾರವಾಡ ಗೋಲ್ಡ್ ಮೈನ್ಸ್ ಲಿ ಗದಗ್ ಗೋಲ್ಡ್ ಫೀಲ್ಡ್ ಅಭಿವೃದ್ಧಿಗೆ ಶ್ರಮಿಸಿತ್ತು. ಲಂಡನ್ನಿನ ಜಾನ್ ಟೇಲರ್ ಎಂಡ್ ಸನ್ಸ್ ಈ ಚಿನ್ನದ ಗಣಿಯಲ್ಲಿ 1902ರಿಂದ 1910ರ ತನಕ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿತ್ತು. ಆದರೆ ನಂತರ ಇಲ್ಲಿ ಹೆಚ್ಚು ಚಿನ್ನದ ಅದಿರು ಲಭ್ಯವಾಗದೇ ಇದ್ದಿದುರಿಂದ 1912ರ ಹೊತ್ತಿಗೆ ಗಣಿಗಾರಿಕೆ ನಿಂತುಹೋಗಿತ್ತು.
ಈಗ ಬಾಲ್ದೊಟ ಗುಂಪಿನ ರಾಮಗಡ ಮಿನರಲ್ಸ್ ಎಂಡ್ ಮೈನಿಂಗ್ ಪ್ರೈ ಲಿ ಎಂಬ ಕಂಪೆನಿಗೆ ಗಣಿಗಾರಿಕೆ ಹಕ್ಕುಗಳನ್ನು ಗದಗದಿಂದ 32 ಕಿ ಮೀ ದೂರವಿರುವ ಸಾಂಗ್ಲಿ ಗ್ರಾಮದಲ್ಲಿ ಅನುಮತಿ ನೀಡಲಾಗಿದ್ದು ಇದೇ ಕಾರಣಕ್ಕೆ ಸಂರಕ್ಷಣಾ ವಲಯ ಘೋಷಣೆಯನ್ನು ಸರಕಾರ ಹಿಂದಕ್ಕೆ ಪಡೆದಿದೆಯೆಂಬ ಊಹಾಪೋಹಗಳಿವೆ. ಗದಗ ಜಿಲ್ಲೆಯಲ್ಲಿ ದಿನಕ್ಕೆ 1000 ಟನ್ ಚಿನ್ನದ ಅದಿರು ತೆಗೆಯುವ ಸಾಮಥ್ರ್ಯವಿರುವ ಘಟಕ ತೆರೆಯಲು ಅನುಮತಿಸಲಾಗಿದೆಯೆಂದು ಕಂಪೆನಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ದಕ್ಷಿಣ ಆಫ್ರಿಕಾದ ಕಂಪೆನಿ ಟರ್ನ್ ಬೆರ್ರಿ ಸಹಾಯದೊಂದಿಗೆ ಈ ಘಟಕ ರೂ 300 ಕೋಟಿ ವೆಚ್ಚದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಸಾಂಗ್ಲಿ ಗಣಿಯಲ್ಲಿ ಒಟ್ಟು 2.4 ಮಿಲಿಯನ್ ಟನ್ ಚಿನ್ನದ ಅದಿರು ಇದೆಯೆಂದು ಅಂದಾಜಿಸಲಾಗಿದ್ದು ಪ್ರತಿ ಟನ್ ಅದಿರಿನಿಲ್ಲಿ 2.8 ಗ್ರಾಂ ಚಿನ್ನ ಲಭ್ಯವಾದರೆ ಕಂಪೆನಿ ಈ ಗಣಿಯಿಂದ ಒಟ್ಟು 8000 ಕೇಜಿ ಚಿನ್ನ ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
“ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲಾಗುವುದಿಲ್ಲ, ಬದಲಾಗಿ ಇಲ್ಲಿಂದ ಸುಮಾರು 30 ಕಿ ಮೀ ದೂರದಲ್ಲಿ ಜೆಲ್ಲಿಗೇರಿ ಮೀಸಲು ಅರಣ್ಯ ಪ್ರದೇಶದ ಬಳಿ ಗಣಿಗಾರಿಕೆಗೆ ಅನುಮತಿಸಲಾಗಿದೆ. ಇಲ್ಲಿಯ ತನಕ ಇದರ ಸುತ್ತಮುತ್ತಲಿನ 10 ಕಿ ಮೀ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗಿದ್ದು ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆ” ಎಂದು ಅಧಿಕಾರಿಗಳು ವಿವರಿಸುತ್ತಾರೆ.
ಅತ್ತ ಸರಕಾರ ತಾನು ಗಣಿ ಲಾಬಿಗೆ ಮಣಿದು ಸಂರಕ್ಷಣಾ ವಲಯ ಘೋಷಣೆಯನ್ನು ಹಿಂದೆಗೆದುಕೊಂಡಿದೆಯೆಂಬ ವಾದವನ್ನು ಒಪ್ಪಲು ಸಿದ್ಧವಿಲ್ಲ. ಗ್ರಾಮಸ್ಥರು ತಮ್ಮ ದನಗಳನ್ನು ಮೇಯಲು ಬಿಡಲು ಸಂರಕ್ಷಣಾ ವಲಯ ಒಂದು ತಡೆಯಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರಿ ಮೂಲಗಳು ವಾದಿಸುತ್ತಿವೆ.
ಗ್ರಾಮಸ್ಥರ ಹಿತಾಸಕ್ತಿಗಳನ್ನು ಸರಕಾರ ರಕ್ಷಿಸುವವರೆಗೆ ಅವರಿಗೆ ಯಾವುದೇ ಸಂರಕ್ಷಣಾ ವಲಯದ ಬಗ್ಗೆ ಆಕ್ಷೇಪವಿಲ್ಲ ಎಂದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರ್ ಗೌಡ ಹೇಳುತ್ತಾರೆ.