ಕಾಜಿಲ-ಪೊಳಲಿ ರಸ್ತೆಗೆ ಕಾಯಕಲ್ಪ ನೀಡುವಿರಾ ?

ಕೈಕಂಬದಿಂದ ಬಿ ಸಿ ರೋಡಿಗೆ ಸಂಚರಿಸುವ ಕಾಜಿಲ ತಿರುವು ಕಾಯಕಲ್ಪ ಬೇಡುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಅಣಕಿಸುತ್ತಿದೆ.

ಕಳೆದ ಮಳೆಗಾಲ ಸಂದರ್ಭ ರಸ್ತೆಯಲ್ಲಿ ಬೃಹತ್ ಪ್ರಮಾಣದಲ್ಲಿ ಕುಸಿತ ಉಂಟಾಗಿ ರಸ್ತೆ ಭಾಗವಾಗಿ ಹೋಗಿತ್ತು. ಸ್ವಲ್ಪ ದಿನಗಳ ಕಾಲ ಈ ರಸ್ತೆಯಲ್ಲಿ  ವಾಹನ ಸಂಚಾರ ನಿಷೇಧಿಸಲಾಗಿತ್ತು. ಆ ಬಳಿಕ ಇಲ್ಲಿ ಕಲ್ಲಿನಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಈ ಭಾಗದಲ್ಲಿ ವಾಹನಗಳು ಸರ್ಕಸ್ ನಡೆಸುತ್ತಾ ಸಂಚರಿಸಲು ಆರಂಭಿಸಿವೆ. ಇದಾದ ಬಳಿಕ ರಸ್ತೆಯನ್ನು ಸರಿಪಡಿಸಬೇಕಿತ್ತು. ಆದರೆ ಆಡಳಿತ ನಡೆಸುವವರ ನಿರ್ಲಕ್ಷ್ಯದಿಂದ ಈ ರಸ್ತೆ ಸರಿಯಾಗಿಲ್ಲ.

ಈ ರಸ್ತೆಯ ಇಕ್ಕೆಲದಲ್ಲಿ ಕಟ್ಟಲಾಗಿದ್ದ ಕಲ್ಲಿನಲ್ಲಿ ನಿರ್ಮಿಸಿದ್ದ ತಡೆಗೋಡೆಯೂ ಕುಸಿದು ಬಿದ್ದಿದೆ. ಇದರಿಂದ ರಸ್ತೆ ಯಾವಾಗ ಕುಸಿದು ಬಿದ್ದು ಅಪಘಾತ ಸಂಭವಿಸಬಹುದು ಎಂದು ಹೇಳಲು ಸಾಧ್ಯವಿಲ್ಲದಂತಾಗಿದೆ. ಈ ರಸ್ತೆಯಲ್ಲಿ ಖಾಸಗಿ ಬಸ್ ಸೇರಿದಂತೆ ನೂರಾರು ವಾಹನಗಳು ಪ್ರತಿನಿತ್ಯ ಸಂಚರಿಸುತ್ತವೆ. ಈ ರಸ್ತೆಯನ್ನೇ ಅವಲಂಬಿಸಿ ಸಾವಿರಾರು ಜನರು ಓಡಾಡುತ್ತಿರುವಾಗ ಸ್ಥಳೀಯ ಶಾಸಕರು ಕೂಡಲೇ ಇಲ್ಲಿನ ರಸ್ತೆಯ ಅವ್ಯವಸ್ಥೆ ಗಮನಿಸಿ ಕೂಡಲೇ ಕಾಯಕಲ್ಪ ನೀಡುವ ಕೆಲಸ ಆಗಬೇಕಾಗಿದೆ.

  • ಸುಕೇಶ್ ಸುವರ್ಣ, ಕರಂಬಾರು-ಬಜಪೆ