ಗಂಗೊಳ್ಳಿ ಬಂದರು ಅಭಿವೃದ್ಧಿಯತ್ತ ಸರಕಾರ ಗಮನ ಕೊಡುವುದೇ ?

ವಿಶೇಷ ವರದಿ

ಉಡುಪಿ : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೀನುಗಾರಿಕಾ ಬೋಟುಗಳ ಸಂಖ್ಯೆಯ ಕಾರಣ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ  ಬೋಟುಗಳಿಗೆ ಲಂಗರು ಹಾಕುವುದು ಇತ್ತೀಚಿಗಿನ ದಿನಗಳಲ್ಲಿ ಸಾಹಸಮಯ ಕೆಲಸವಾಗಿ ಬಿಟ್ಟಿದೆ. ಮಲ್ಪೆ ಬಂದರಿನ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಗಂಗೊಳ್ಳಿ ಬಂದರನ್ನು ಇನ್ನೂ ಅಭಿವೃದ್ಧಿಪಡಿಸಬೇಕೆಂಬುದು ಮೀನುಗಾರರ ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

2007ರಲ್ಲಿ ಅಸ್ತಿತ್ವಕ್ಕೆ ಬಂದ ಗಂಗೊಳ್ಳಿ ಮೀನುಗಾರಿಕಾ ಬಂದರನ್ನು ರೂ 9.21 ಕೋಟಿ ವೆಚ್ಚದಲ್ಲಿ ಕೊಚ್ಚಿಯ ಜಿಯೋ ಟೆಕ್ ಕನಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್ ಅಭಿವೃದ್ಧಿಪಡಿಸಿತ್ತು. ಈ ಬಂದರು ಯೋಜನೆಗೆ ಸೆಂಟ್ರಲ್ ಇನಸ್ಟಿಟ್ಯೂಟ್ ಆಫ್ ಕೋಸ್ಟಲ್ ಇಂಜಿನಿಯರಿಂಗ್ ಫಾರ್ ಫಿಶರೀಸ್ 1996ರಲ್ಲೇ ಹಸಿರು ನಿಶಾನೆ ನೀಡಿತ್ತು.

ಬಂದರಿನಲ್ಲಿ ಮೀನುಗಾರರ ಉಪಕರಣಗಳನ್ನು ಶೇಖರಿಸಿಡಲು 505 ಚದರ ಮೀಟರ್ ವ್ಯಾಪ್ತಿಯ ಶೆಡ್ ಬಾಡಿಗೆಯಾಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಂದರಿನ ರಸ್ತೆ ಸಂಪರ್ಕವೂ ಉತ್ತಮವಾಗಿದ್ದು, ಮೀನುಗಾರರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆಯಿದೆ. ಆದರೆ ಇಲ್ಲಿ ತ್ಯಾಜ್ಯ ನಿರ್ವಹಣಾ ಘಟಕದ ಅವಶ್ಯಕತೆಯಿದ್ದು ಇದು ಪ್ರಾರಂಭಗೊಂಡಲ್ಲಿ ಬಂದರಿನ ತ್ಯಾಜ್ಯವು ಸಮುದ್ರ ಸೇರುವುದನ್ನು ತಡೆಗಟ್ಟಬಹುದಾಗಿದೆ.

ಪ್ರಸಕ್ತ ಈ ಬಂದರಿನಿಂದ 550ಕ್ಕೂ ಹೆಚ್ಚು ಯಾಂತ್ರೀಕೃತ ಹಾಗೂ 1,045 ಸಾಂಪ್ರದಾಯಿಕ ದೋಣಿಗಳು ಕಾರ್ಯನಿರ್ವಹಿಸುತ್ತಿದ್ದರೂ, ಅಗತ್ಯ ಹಣಕಾಸಿನ ಕೊರತೆಯಿಂದ ಬಂದರು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆಯೆಂಬುದು ಇಲ್ಲಿನ ಮೀನುಗಾರರು ಹೇಳುತ್ತಾರೆ. ಕಳೆದ ವರ್ಷ ಈ ಬಂದರಿನ ಮೂಲಕ ರೂ 14,244 ಲಕ್ಷ ಮೌಲ್ಯದ 16,395 ಮೆಟ್ರಿಕ್ ಟನ್ ಮೀನುಗಳು ಲಭ್ಯವಾಗಿವೆ.

ಪ್ರಸಕ್ತ ನಡೆಯುತ್ತಿರುವ ಬ್ರೇಕ್ ವಾಟರ್ ಕಾಮಗಾರಿಯಿಂದಾಗಿ ಹೂಳಿನ ಸಮಸ್ಯೆಗೆ ಪರಿಹಾರ ದೊರೆಯುವುದೆಂದು ಅಧಿಕಾರಿಗಳು ಹೇಳುತ್ತಿದ್ದಾರಾದರೂ ಹೂಳಿನಿಂದಾಗಿ ಇಲ್ಲಿ ಈಗಾಗಲೇ ಸಂಭವಿಸಿರುವ ಅಪಘಾತಗಳಿಂದ ಮೀನುಗಾರರು ಆತಂಕಿತರಾಗಿದ್ದಾರೆ.

ಉಡುಪಿ ಜಿಲ್ಲಾ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣಪತಿ ಭಟ್ ಹೇಳುವಂತೆ ಬ್ರೇಕ್ ವಾಟರ್ ಯೋಜನೆ ಪೂರ್ಣಗೊಳ್ಳಲು ಕನಿಷ್ಠ ನಾಲ್ಕು ವರ್ಷಗಳ ಅಗತ್ಯವಿದೆ.

ಬಂದರಿನಲ್ಲಿ ರಫ್ತು ಉದ್ಯಮಕ್ಕೆ ಅನುಕೂಲಕರವಾಗುವಂತೆ ಕನಿಷ್ಠ ಸೌಲಭ್ಯಗಳು ಲಭ್ಯವಿವೆಯೇ ಎಂದು ಪರಿಶೀಲಿಸಲು ರಫ್ತು ತನಿಖಾ ಏಜನ್ಸಿಯ ಅಧಿಕಾರಿಗಳು ಇತ್ತೀಚೆಗೆ ಇಲ್ಲಿಗೆ ಬಂದು ತಪಾಸಣೆ ನಡೆಸಿದ್ದಾರೆ. ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ತಜ್ಞರು ಕೂಡ ಈ ಬಂದರಿನ ಮೂಲಕ ಮೀನು ಲಭ್ಯತೆ ಮತ್ತು ಅವುಗಳ ಸಾಗಾಟದ ಬಗ್ಗೆ ತಿಳಿದುಕೊಂಡಿದ್ದಾರೆ.

ಪ್ರಸಕ್ತ ಮಹಿಳಾ ಮೀನುಗಾರರಿಗೆ ವಿಶ್ರಾಂತಿ ಕೊಠಡಿ, ಅಬಾಧಿತ ನೀರು ಪೂರೈಕೆಗಾಗಿ ನೀರಿನ ಟ್ಯಾಂಕ್ ಹಾಗೂ ಖಾಲಿ ಮೀನಿನ ಬುಟ್ಟಿಗಳನ್ನಿಡಲು ಒಂದು ಶೆಡ್ ನಿರ್ಮಾಣದ ಅಗತ್ಯವಿದೆ. ಸರಕಾರ ಈ ಬಂದರಿನ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಒತ್ತು ನೀಡುವುದೆಂದು ಇಲ್ಲಿನ ಮೀನುಗಾರರ ಆಶಯವಾಗಿದೆ.