ಸಂಸದ ನಳಿನ್ ಕಾಂಗ್ರೆಸ್ಸಿಗೆ ಬಂದರೆ ಉನ್ನತ ಸ್ಥಾನ ಕೊಡಿಸುವೆ : ಶಕುಂತಳಾ

ಪುತ್ತೂರು : ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಸೇರುವುದಾದರೆ ಅವರಿಗೆ ನಾನು ಹೈಕಮಾಂಡ್ ಜೊತೆ ಮಾತನಾಡಿ, ಉನ್ನತ ಸ್ಥಾನಮಾನ ಕೊಡಿಸುವೆ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಪತ್ರಕರ್ತರ ಜೊತೆ ಮಾತನಾಡಿದ ಅವರು, “ನಾನು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಇನ್ನು ಸಾಯುವವರೆಗೂ ನಾನು ಕಾಂಗ್ರೆಸ್ಸಿನಲ್ಲೇ ಇರುತ್ತೇನೆ. ಕೆಲವರು ಇಲ್ಲ ಸಲ್ಲದ ಹೇಳಿಕೆ ನೀಡಿ ಕಾರ್ಯಕರ್ತರ ಮನಸ್ಸಿಗೆ ನೋವು ತರುವ ಕೆಲಸ ಮಾಡುತ್ತಿದ್ದಾರೆ. ನಾನೆಂದಿಗೂ ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಪಕ್ಷದ ಕಾರ್ಯಕರ್ತರು ಹಗಲಿರುಳೆನ್ನದೆ ಪಕ್ಷಕ್ಕಾಗಿ ದುಡಿದು ತನ್ನನ್ನು ಗೆಲ್ಲಿಸಿದ್ದಾರೆ. ನನ್ನ ಅಭಿಮಾನಿಗಳೂ ನನಗೆ ಮತ ನೀಡಿದ್ದಾರೆ, ಎಲ್ಲರಿಗೂ ನಾನು ಕೃತಜ್ಞಳಾಗಿದ್ದೇನೆ. ಪಕ್ಷಕ್ಕೆ ಯಾರೇ ಬಂದರೂ ಅವರನ್ನು ಸ್ವಾಗತಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಾರೆ. ನಳಿನ್ ಕುಮಾರ್ ಬಂದರೂ ನಮಗೆ ಸಂತೋಷವೇ, ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಕೊಟ್ಟು ಮುಂದಿನ ಲೋಕಸಭಾ ಸೀಟನ್ನು ತೆಗೆಸಿಕೊಡುವೆ” ಎಂದು ಹೇಳಿದರು.