ಬಿಷಪ್ ಕೊರಳಿಗೆ ಬೀಳಲಿದೆಯೇ ಕೊರ್ಡೆಲ್ ಚರ್ಚ್ ಹಗರಣ ?

ಬಿಷಪ್ ಅಲೋಶಿಯಸ್ ಪೌಲ್ ಡಿಸೋಜ

* ಫಾಲೋಅಪ್ *

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇಲ್ಲಿನ ಕುಲಶೇಖರದ ಕೊರ್ಡೆಲ್ ಹಾಲಿ ಕ್ರಾಸ್ ಚರ್ಚಿನ ಹಿಂದಿನ ಪಾದ್ರಿ ವಲೆರಿಯನ್ ಪಿಂಟೋ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಐದು ಕೋಟಿ ರೂಪಾಯಿ ಹಗರಣ ಅಂತಿಮವಾಗಿ ಮಂಗಳೂರು ಧರ್ಮಪ್ರಾಂತ ನಿರ್ಗಮನ ಬಿಷಪ್ ಅವರ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

ಕೊರ್ಡೆಲ್ ಚರ್ಚಿನಲ್ಲಿ ಸಂಗ್ರಹವಾದ ನಿಧಿಯಿಂದ ನಡೆಸಲಾದ 21 ಕಾಮಗಾರಿಗಳಲ್ಲಿ ಸುಮಾರು ಐದು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ತನಿಖೆಯಿಂದ ಖಚಿತವಾಗಿದ್ದರೂ, ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿರುವ ಬಿಷಪ್ ಅಲೋಶಿಯಸ್ ಪೌಲ್ ಡಿಸೋಜ ಅವರು ಕ್ರಮ ಕೈಗೊಳ್ಳದಿರುವುದು ಚರ್ಚ್ ಸದಸ್ಯರಿಗೆ ಮತ್ತು ಧರ್ಮವಿಶ್ವಾಸಿಗಳಲ್ಲಿ ಸಂದೇಹ ಸೃಷ್ಟಿಸಿದೆ.

ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಯ ಸಂದರ್ಭದಲ್ಲೇ ಈ ವಿಚಾರ ಚರ್ಚೆಗೆ ಬರಲು ಗುರುವಾರ ಕೊರ್ಡೇಲ್ ಚರ್ಚಿನ ಸದಸ್ಯರು ಕಪ್ಪು ಬಟ್ಟೆ ಧರಿಸಿ ಕೊಡಿಯಾಲಬೈಲ್ ಬಿಷಪ್ ಹೌಸಿನಲ್ಲಿ ಮೌನ ಪ್ರತಿಭಟನೆ ನಡೆಸಿರುವುದು ಕಾರಣವಾಗಿದೆ.

ಪಾದ್ರಿ ವೆಲೇರಿಯನ್ ಪಿಂಟೊ ಅವರು ಈ ಚರ್ಚಿನಲ್ಲಿದ್ದಾಗ 2008ರಿಂದ 2015ರತನಕದ ಅವಧಿಯಲ್ಲಿ ಹಣದ ಅವ್ಯವಹಾರಗಳು ನಡೆದಿವೆ ಎಂದು ದಾಖಲೆಗಳ ಸಹಿತ ಬಹಿರಂಗವಾಗಿತ್ತು.

ಈ ವಿಚಾರ ಬೆಳಕಿಗೆ ಬಂದ ಅನಂತರ ಕೊರ್ಡೇಲ್ ಚರ್ಚಿನ ಹಣಕಾಸು ಸಮಿತಿ ಮತ್ತು ಬಿಷಪ್ ವತಿಯಿಂದ ಎರಡು ಪ್ರತ್ಯೇಕ ತನಿಖೆಗಳು ನಡೆದು ಅವ್ಯವಹಾರ ನಡೆದಿರುವುದು ಹೌದೆಂದು ಎರಡೂ ಸಮಿತಿಗಳು ವರದಿ ನೀಡಿದ್ದವು. ಆದರೆ, ಮಂಗಳೂರು ಧರ್ಮಪ್ರಾಂತದಿಂದ ಕೆಥೋಲಿಕ್ ಚರ್ಚ್ ವ್ಯವಸ್ಥೆಯ ಮೇಲಿನ ಧರ್ಮಾಧಿಕಾರಿಗಳಿಗೆ ವರದಿ ನೀಡುವ ಮೊದಲೇ ಸಂಬಂಧಪಟ್ಟ ಪಾದ್ರಿ ಪಿಂಟೋ ಅವರು ಪ್ರತ್ಯೇಕವಾದ ವರದಿ ಸಲ್ಲಿಸಿ ಅದರಲ್ಲಿ ಬಿಷಪ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎನ್ನಲಾಗಿದೆ.

ತನ್ನ ಕಡೆಯಿಂದ ತಪ್ಪು ನಡೆದಿರುವುದು ಹೌದು ಎಂದು ಪಾದ್ರಿ ಪಿಂಟೋ ಅವರು ತಪೆÇ್ಪಪ್ಪಿಗೆ ಪತ್ರವನ್ನು ಬಿಷಪ್ ಅವರಿಗೆ ನೀಡಿದ್ದರು. ಅವ್ಯವಹಾರಗಳಿಗೆ ತಾನೊಬ್ಬನೇ ಕಾರಣ ಎಂದಿದ್ದರು. ಮಾತ್ರವಲ್ಲದೆ, ಸುಮಾರು ರೂ 4.89 ಲಕ್ಷದ ಚೆಕ್ಕೊಂದನ್ನು ಕೂಡ ನೀಡಿದ್ದರು. ಚೆಕ್ ಅನಂತರ ಬ್ಯಾಂಕಿನಲ್ಲಿ ಬೌನ್ಸ್ ಆಯಿತು. ಹೀಗಿದ್ದರೂ, ಬಿಷಪ್ ಕಚೇರಿಯಿಂದ ತಕ್ಕ ಕ್ರಮ ನಡೆಯದಿರುವುದಕ್ಕೆ ಕಾರಣಗಳೇನು ಎಂಬುದು ಈಗ ತನಿಖೆ ನಡೆಸಬೇಕಾದ ವಿಚಾರವಾಗಿದೆ.

ಪಿಂಟೋ ಅವರು ಬಿಷಪ್ ಅಲೋಶಿಯಸ್ ಡಿಸೋಜ ವಿರುದ್ಧವೇ ಗುರುತರ ಆರೋಪ ಮಾಡುವ ಮೂಲಕ ತನ್ನ ವಿರುದ್ಧ ಕ್ರಮ ಕೈಗೊಳ್ಳದಂತೆ ಬಿಷಪ್ ಅವರನ್ನು ಇಕ್ಕಟಿಗೆ ಸಿಲುಕಿಸಿದ್ದಾರೆ ಎನ್ನುವುದು ಹಲವರ ನಂಬಿಕೆ. ಬಿಷಪ್ ಅಲೋಶಿಯಸ್ ಪೌಲ್ ಡಿಸೋಜ ಅವರ ಅಧಿಕಾರಾವಧಿ ಕೊನೆಗೊಂಡಿದ್ದು, ಇನ್ನೊಂದು ತಿಂಗಳ ಕಾಲ ಅವರೇ ಬಿಷಪ್ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ತಾನು ಹೇಗೂ ನಿವೃತ್ತಿ ಆಗುತ್ತಿರುವುದರಿಂದ ಕೊರ್ಡೆಲ್ ಚರ್ಚ್ ಅವ್ಯವಹಾರಕ್ಕೆ ಸಂಬಂಧಿಸಿ ಯಾವ ಕ್ರಮವನ್ನೂ  ಬಿಷಪ್ ಕೈಗೊಳ್ಳಲಿಲ್ಲ ಎನ್ನಲಾಗುತ್ತಿದೆ. ಆದರೆ, ಬಿಷಪ್ ನಿರ್ಗಮನ ಸಮಯದಲ್ಲಿ ಪಾದ್ರಿ ಪಿಂಟೋ ಅವರ ಅವ್ಯವಹಾರ ಬಿಷಪ್ ಅವರ ಕೊರಳಿಗೂ ಬೀಳಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.