ಕಾಡಾನೆ ದಾಳಿ : ಭಾರೀ ನಷ್ಟ

ಕಾಡಾನೆ ದಾಳಿಗೆ ನಾಶಗೊಂಡಿರುವ ತೋಟ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬೇಡಗಂ ಒಳಿಯತ್ತಡ್ಕ ಬಳಿ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕ ನಾಶಕ್ಕೆ ಕಾರಣವಾಗಿದೆ.

ಸ್ಥಳೀಯ ನಿವಾಸಿ ಸುಧಾಕರನ್ ಎಂಬವರ ಕಂಗಿನ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ನೂರಕ್ಕೂ ಮಿಕ್ಕಿದ ಕಂಗುಗಳನ್ನು ಸಂಪೂರ್ಣ ನಾಶಗೊಳಿಸಿದೆ. ಜೊತೆಗೆ ತೋಟದ ನೀರು ಪೂರೈಕೆಗೆ ಅಳವಡಿಸಿದ್ದ ಹನಿ ನೀರಾವರಿಯ ಪೈಪುಗಳನ್ನೂ ಪುಡಿಗಟ್ಟಿದೆ. ಬಾಳೆ ಸಹಿತ ಇತರ ಉಪ ಬೆಳೆಗಳೂ ನಷ್ಟವಾಗಿದೆ. ಸುಮಾರು ಏಳರಷ್ಟಿದ್ದ ಕಾಡಾನೆಗಳ ಹಿಂಡು ಈ ರಾದ್ದಾಂತ ಸೃಷ್ಟಿಸಿತು.

ಬೇಡಗ, ಮುಳಿಯಾರ್, ಕಾರಡ್ಕ ಗ್ರಾಮ ಪಂಚಾಯತಿ ವ್ಯಾಪ್ತಿಯೊಳಗಿರುವ ಅರಣ್ಯದೊಳಗಡೆ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಇದೀಗ ಬೇಸಿಗೆ ಕಾರಣ ಕಾಡಲ್ಲಿ ಆಹಾರ ಮತ್ತು ನೀರಿನ ಕೊರತೆ ತಲೆದೋರಿರುವುದರಿಂದ ನಾಡೊಳಗೆ ನುಗ್ಗಿ ವ್ಯಾಪಕ ಕೃಷಿ ನಾಶಕ್ಕೆ ಮುಂದಾಗುತ್ತಿವೆ. ಅರಣ್ಯ ಇಲಾಖೆಯ ಅಧಿಕೃತರು ಕಾಡಾನೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಕಾರಡ್ಕ, ಮುಳಿಯಾರ್, ಬೇಡಗ, ದೇಲಂಪಾಡಿ ವ್ಯಾಪ್ತಿಗಳಲ್ಲಿ ಕಾಡಾನೆಗಳು ವ್ಯಾಪಕ ದಾಳಿ ನಡೆಸುತ್ತಿದ್ದು, ಲಕ್ಷಾಂತರ ರೂ ಕೃಷಿ ನಷ್ಟ ಉಂಟಾಗಿದೆ. ಕಾಡಾನೆ ನಿಯಂತ್ರಣಕ್ಕೆ ಸೌರ ಬೇಲಿಗಳನ್ನು ಕೆಲವೆಡೆ ನಿರ್ಮಿಸಿದ್ದರೂ, ನಿರ್ವಹಣೆಯ ಕೊರತೆಯಿಂದ ಪರಿಣಾಮಕಾರಿಯಾಗಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.