ಕಾಡುಹಂದಿ ಕೊಲ್ಲಬಹುದು ಆದರೆ ತಿನ್ನುವಂತಿಲ್ಲ ವಿಚಿತ್ರ ಕಾನೂನು

ರಾಜ್ಯ ಸರಕಾರವು ರೈತರ ಕೃಷಿ ಫಸಲು ನಾಶ ಮಾಡುವ ಕಾಡು ಹಂದಿಗಳನ್ನು ಹತ್ಯೆ ಮಾಡಬಹುದು ಎನ್ನುವ ಆದೇಶ ಎರಡು ತಿಂಗಳ ಹಿಂದೆ ಹೊರಡಿಸಿದೆ. ಆದರೆ ಹತ್ಯೆಗೊಳಿಸಿದ ಕಾಡುಹಂದಿಯನ್ನು ತಿನ್ನುವಂತಿಲ್ಲ. ಹತ್ಯೆಗೊಳಿಸಿದ ತಕ್ಷಣ ಬೇಟೆಗಾರ ಅರಣ್ಯ ಇಲಾಖೆಗೆ ದೂರು ನೀಡಬೇಕು. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು, ಮಹಜರು ಪ್ರಕ್ರಿಯೆ ನಡೆಸಿದ ಅನಂತರ ಮೂರಡಿ ಗುಂಡಿ ತೋಡಿ ಅವರ ಸಮ್ಮುಖ ಹಂದಿ ಕಳೆಬರವನ್ನು ದಫನ ಮಾಡಬೇಕೆನ್ನುವುದು ಕಾನೂನು ನಿಯಮಾವಳಿಯಾಗಿದೆ.
ಕಾಡುಹಂದಿ ಮಾಂಸಕ್ಕೆ ಬಹು ಬೇಡಿಕೆ ಇದೆ. ಅಧಿಕ ಬೆಲೆ ಇರುವುದರಿಂದ ಬೇಟೆಗಾರ ಕೊಂದ ಹಂದಿಯನ್ನು ಅರಣ್ಯ ಇಲಾಖೆಗೆ ಖಂಡಿತ ಒಪ್ಪಿಸುವುದಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಬೇಟೆಗಾರರ ಒಳಒಪ್ಪಂದ ಹೊಂದಾಣಿಕೆಯಿಂದ, ಹಂಚಿ ತಿನ್ನುವ ಅವಕಾಶಗಳು ಉಂಟು. ಮಾಂಸ ಭಕ್ಷಕರಿಗೆ ಬೇಟೆಗಾರರಿಗೆ ಸರಕಾರದ ಆದೇಶ ವರದಾನವಾಗಿದೆ. ಈಗಾಗಲೇ ಅಕ್ರಮ ಶಿಕಾರಿ ಮಾಡುವವರಿಂದ ಕಾಡು ಹಂದಿಗಳ ಸಂತತಿ ವಿನಾಶದಂಚಿಗೆ ಹೋಗಿದೆ. ಕಾಡು ನಾಶ ಮಾಡುವವರಿಂದ ಆಹಾರದ ಕೊರತೆ ಉಂಟಾಗಿ ಹಂದಿಗಳು ನಾಡಿಗೆ ಬರುತ್ತಿವೆ. ಎಲ್ಲರಂತೆ ಅವುಗಳಿಗೂ ಬದುಕುವ ಹಕ್ಕಿದೆ. ಸರಕಾರ ಜಾರಿಗೊಳಿಸಿದ ಕಾಡು ಹಂದಿ ಹತ್ಯೆ ಆದೇಶ ಹಿಂಪಡೆಯಬೇಕು. ರೈತರಿಗೆ ಕಾಡು ಹಂದಿಗಳ ಉಪಟಳದಿಂದ ರಕ್ಷಿಸಲು ಬೇರೆ ಮಾರ್ಗ ಕಂಡು ಹಿಡಿಯಲಿ.
ಹಂದಿಗಳಂತೆ ರೈತರ ಹೊಲ ಗದ್ದೆಗಳಿಗೆ ಕಾಡುಕೋಣ, ಜಿಂಕೆ-ಕಡವೆ, ಆನೆ, ಮಂಗ, ಮೊಲ ಮುಂತಾದ ಸಸ್ಯಹಾರಿ ಪ್ರಾಣಿಗಳು ತಮ್ಮ ಉದರ ಹಸಿವೆಗಾಗಿ ದಾಳಿ ಮಾಡುತ್ತವೆ. ಇವುಗಳಿಗೂ ನಾಳೆಯ ದಿನಗಳಲ್ಲಿ ಸರಕಾರ ರೈತರ ಹಿತದೃಷ್ಟಿಯಿಂದ ಹತ್ಯೆಗೊಳಿಸುವ ಕಾನೂನು ಜಾರಿಗೊಳಿಸಬಹುದು. ಹಂದಿ ಹತ್ಯೆಗೊಳಿಸುವ ಕಾನೂನು ಪರಿಣಾಮದಿಂದ ವನ್ಯ ಪ್ರಾಣಿ ಸಂಕುಲ ನಾಶಗೊಂಡು, ಈ ಮುಂದೆ ಹೀಗೆ ನಡೆದರೆ ಪ್ರಾಣಿಗಳನ್ನು ಸಾಮಾಜಿಕ ಜಾಲತಾಣ, ಭೂಪಟಗಳಲ್ಲಿ ಕಾಣುವ ಪರಿಸ್ಥಿತಿ ಬರಬಹುದು. ಹಾಗಾಗಿ ಸರಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ

  • ತಾರಾನಾಥ್ ಮೇಸ್ತ
    ಶಿರೂರು ಉಡುಪಿ