ಹೆಂಡತಿಗೆ ಸೆಕ್ಸಿನಲ್ಲಿ ಆಸಕ್ತಿಯೇ ಇಲ್ಲ

ಪ್ರ : ಮದುವೆಯಾಗಿ 15 ವರ್ಷಗಳಾದವು. ಎರಡು ಮಕ್ಕಳಿದ್ದಾರೆ. ಆದರೆ ನನಗೆ ನನ್ನ ಸೆಕ್ಸ್ ಜೀವನದ ಬಗ್ಗೆ ತುಂಬಾ ನಿರಾಶೆಯಿದೆ. ಮದುವೆಯಾಗಿ ಒಂದು ಮಗುವಾಗುವವರೆಗೆ ವಾರಕ್ಕೊಮ್ಮೆಯಾದರೂ ಸೇರುತ್ತಿದ್ದೆವು. ಅದರ ನಂತರ ನಾವು ಒಂದಾಗುತ್ತಿದ್ದುದು ತಿಂಗಳಿಗೋ, ಎರಡು ತಿಂಗಳಿಗೋ ಒಮ್ಮೆ. ಎರಡನೇ ಮಗುವಾದ ಬಳಿಕ ಅದು ಮತ್ತೂ ವಿರಳವಾಗಿದೆ. ಅದಕ್ಕೆಲ್ಲ ಕಾರಣ ನನ್ನ ಹೆಂಡತಿಗೆ ಸೆಕ್ಸ್‍ನಲ್ಲಿ ಸ್ವಲ್ಪವೂ ಆಸಕ್ತಿ ಇರದಿದ್ದುದು. ಎರಡನೇ ಮಗು ಬೇಕು ಅಂದಾಗ ಸ್ವಲ್ಪ ಇಂಟರೆಸ್ಟ್ ತೋರಿಸಿದ್ದಳು. ಅದರ ನಂತರ ನನ್ನ ಒತ್ತಾಯಕ್ಕೆ ನನಗೆ ಬೇಕಾಗಿ ಕೆಲವು ಬಾರಿ ಮಾತ್ರ ಹತ್ತಿರ ಬಂದಿದ್ದಾಳೆ. ಅವಳು ಯಾವಾಗಲೂ ತನ್ನ ಕೆಲಸ-ಕಾರ್ಯ, ಪೂಜೆ-ಪುನಸ್ಕಾರಗಳಲ್ಲಿ ಮುಳುಗಿರುತ್ತಾಳೆ. ಅವಳು ಟೀವಿಯಲ್ಲಿ ನೋಡುವುದೂ ಬರೀ ಆಧ್ಯಾತ್ಮ. ನನಗೆ ದೇವರ ಮೇಲೆ ನಂಬಿಕೆ ಇದ್ದರೂ ಜೀವನವನ್ನು ಎಲ್ಲ ರೀತಿಯಲ್ಲಿ ಅನುಭವಿಸಬೇಕೆನ್ನುವ ಮನೋಭಾವದವನು ನಾನು.  ಅದನ್ನು ಅವಳಿಗೆ ಹೇಳಲು ಹೋದರೆ `ನಿಮಗೆ ಅಷ್ಟು ಸೆಕ್ಸ್ ಬೇಕೇ ಅಂತಿದ್ದರೆ ನೀವು ಬೇರೆಯವರಿಂದ ಅದನ್ನು ಪಡೆದರೂ ನನ್ನ ಅಭ್ಯಂತರವಿಲ್ಲ’ ಅಂತಾಳೆ. ನೈತಿಕವಾಗಿ ಅದು ಸರಿಯಲ್ಲದ ಕಾರಣ ನನಗೆ ಆ ಬಗ್ಗೆ ಹಿಂಜರಿಕೆಯಿದೆ. ನಿಮ್ಮ ಸಲಹೆ ಏನು?

: ನಿಮ್ಮ ಹೆಂಡತಿಗೆ ಹೀಗೆ ಸೆಕ್ಸ್‍ನಲ್ಲಿ ಸ್ವಲ್ಪವೂ ಆಸಕ್ತಿ ಇರದಿದ್ದುದಕ್ಕೆ ಯಾವುದೋ ಬಲವಾದ ಕಾರಣ ಇರಬೇಕು. ಚಿಕ್ಕವಳಿರುವಾಗ ಆಕೆಯ ಮನಸ್ಸಿನ ಮೇಲೆ ಪರಿಣಾಮ ಉಂಟುಮಾಡಿರುವ ಯಾವುದೋ ಘಟನೆ ನಡೆದಿರಬಹುದು. ಕೆಲವೊಮ್ಮೆ ಬಾಲ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯದಿಂದ ಕೆಲವು ಮಹಿಳೆಯರು ಮುಂದೆ ಸೆಕ್ಸ್ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳಬಹುದು. ಅದರ ಬಗ್ಗೆ ಒಂದು ರೀತಿಯ ಅಸಹ್ಯ ಭಾವನೆ ಬೆಳೆಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಅಥವಾ ಆಕೆ ದೈಹಿಕವಾಗಿ ದುರ್ಬಲಳೂ ಇರಬಹುದು. ನೀವು ಅವಳನ್ನು ಮೊದಲೇ ಕೌನ್ಸೆಲಿಂಗಿಗೆ ಕರೆದುಕೊಂಡು ಹೋಗಬೇಕಿತ್ತು. ಅವಳ ಈ ರೀತಿಯ ನಡೆಗೆ ಕಾರಣ ಕಂಡುಕೊಳ್ಳದೇ ಅದಕ್ಕೆ ಪರಿಹಾರ ಹುಡುಕುವುದು ಕಷ್ಟ. ಇನ್ನಾದರೂ ಪ್ರೀತಿಯ ಮಾತಿನಿಂದ ಅವಳ ಮನಸ್ಸನ್ನು ಅರಿಯಲು ಪ್ರಯತ್ನಿಸಿ. ಆಧ್ಯಾತ್ಮದ ಬಗ್ಗೆ ಅತೀವ ಒಲವಿದ್ದರೂ ಮದುವೆಯಾದ ಗಂಡನ ಜೊತೆಗೆ ಸುಖಿಸುವುದು ತಪ್ಪಲ್ಲ ಅನ್ನುವ ಭಾವನೆ ಅವಳಲ್ಲಿ ಮೂಡಿಸಿ. ನಿಮ್ಮ ಸಂಬಂಧ ಮತ್ತಿಷ್ಟು ಬೆಸೆಯಲು ಅದು ಅವಶ್ಯಕ ಅನ್ನುವುದನ್ನೂ ಅವಳಿಗೆ ಮನಗಾಣಿಸಿ. ವೈದ್ಯರನ್ನೂ ಭೇಟಿಯಾಗಿ ಅಕೆಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಲಲು ಪ್ರಯತ್ನಿಸಿ. ಅಷ್ಟಾಗಿಯೂ ನಿಮ್ಮ ಯಾವ ಪ್ರಯತ್ನವೂ ಕೈಗೂಡದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುವುದು ನಿಮ್ಮ ಭಾವನೆಗೆ ಬಿಟ್ಟಿದ್ದು.