ಮೀನು ಸಂಸ್ಕರಣಾ ಘಟಕಗಳಿಂದ ವ್ಯಾಪಕ ತೆರಿಗೆ ವಂಚನೆ ?

ಇತ್ತೀಚಿನ ಐಟಿ ದಾಳಿ ಬಿಚ್ಚಿಟ್ಟ ಸತ್ಯ

ಕರಾವಳಿ ಅಲೆ  ವಿಶೇಷ ವರದಿ

ಮಂಗಳೂರು :  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವು ಮೀನು ಸಂಸ್ಕರಣಾ ಘಟಕಗಳ ಮೇಲೆ ಇತ್ತೀಚೆಗೆ ನಡೆದ ಆದಾಯ ತೆರಿಗೆ ದಾಳಿಗಳು ಪತ್ತೆ ಹಚ್ಚಿದ 195 ಕೋಟಿ ರೂ ತೆರಿಗೆ ವಂಚನೆ ಮಂಜುಗಡ್ಡೆಯ ತುದಿಯನ್ನಷ್ಟೇ ಮುಟ್ಟಿರಬಹುದು ಎನ್ನುತ್ತವೆ ಮೂಲಗಳು. ಕರಾವಳಿ ತೀರದಾದ್ಯಂತ ಇರುವ ಇಂತಹ ಹಲವು ಘಟಕಗಳು ಸಾವಿರಾರು ಜನರಿಗೆ ಉದ್ಯೋಗ ಒದಗಿಸುತ್ತಿದ್ದರೂ ಇಲ್ಲಿ ತೆರಿಗೆ ವಂಚನೆಗಳೂ ವ್ಯಾಪಕವಾಗಿ ನಡೆಯುತ್ತಿವೆಯೆಂದು ಹೇಳಲಾಗುತ್ತಿದೆ. “ಇತ್ತೀಚೆಗೆ ದಾಳಿ ನಡೆದ ಘಟಕಗಳಿಗೆ ಯಾವುದೇ ರಾಜಕೀಯ ನಂಟಿಲ್ಲ, ಮೇಲಾಗಿ ಎರಡೂ ಸಮುದಾಯಗಳ ಒಡೆತನದ ಘಟಕಗಳ ಮೇಲೆ ದಾಳಿ ನಡೆದಿರುವುದರಿಂದ ಇಲ್ಲಿ ಮತೀಯ ವಿಚಾರವೂ ಅಪ್ರಸ್ತುತವಾಗುತ್ತದೆ ಎಂದು ಮೂಲಗಳು ತಿಳಿಸುತ್ತವೆ.

ಹೆಚ್ಚಿನ ಮೀನು ಸಂಸ್ಕರಣಾ ಘಟಕಗಳು  ಆದಾಯ ತೆರಿಗೆಯ ವಿಚಾರ ಬಂದಾಗ ಕೃಷಿ ಸಂಬಂಧಿತ ಚಟುವಟಿಕೆಗಳು ಎಂಬ ಸೋಗಿನಡಿಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತವೆ. “ಮೀನುಗಾರಿಕೆ ಒಂದು ಕೃಷಿ ಸಂಬಂಧಿತ ಚಟುವಟಿಕೆಯಾಗಿರುವುದರಿಂದ ಹೆಚ್ಚಿವನರು ತಾವು ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲವೆಂದು ತಿಳಿಯುತ್ತಾರೆ. ಹೆಚ್ಚಿನ ಮೀನುಗಾರಿಕಾ ಬೋಟುಗಳ ಮಾಲಕರು ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದರೂ ಲೆಕ್ಕಪತ್ರಗಳನ್ನಿಟ್ಟುಕೊಳ್ಳುವುದಿಲ್ಲ. ದೊರೆತ ಆದಾಯವನ್ನು ಕೆಲಸಗಾರರ ನಡುವೆ ಹಂಚಿ ನಂತರ ಉಳಿದಿದ್ದನ್ನು ಮಾಲಕರು ತಾವು ಇಟ್ಟುಕೊಳ್ಳುವ ಪರಿಪಾಠವಿದೆ” ಎಂದು ಮೂಲಗಳು ತಿಳಿಸುತ್ತವೆ.

ದಾಳಿಗೊಳಗಾದ ಮೀನು ಸಂಸ್ಕರಣಾ ಘಟಕಗಳಿಗೆ ನಕಲಿ ಸಾಲಗಾರರು ಹಾಗೂ ಬೇನಾಮಿ ಖಾತೆಗಳಿದ್ದವೆಂದು ಹೇಳಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಒಬ್ಬನೇ ವ್ಯಕ್ತಿ ಹಲವು ಬೋಟುಗಳನ್ನು ವಿವಿಧ ಜನರ ಹೆಸರಿನಲ್ಲಿ ಹೊಂದಿರಬಹುದು. ಕೆಲವರು ತಮ್ಮ ಉದ್ಯೋಗಿಗಳ ಹೆಸರಿನಲ್ಲಿಯೂ ಬೋಟ್ ಖರೀದಿಸಿರುತ್ತಾರೆ. ಸಾಮಾನ್ಯವಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೀನುಗಾರರು ಸರಕಾರ ಕೊಡಮಾಡಿದ ಸಬ್ಸಿಡಿಯುಕ್ತ ಸೀಮೆಎಣ್ಣೆಯನ್ನು ಬಳಸುತ್ತಾರಾದರೂ ಕೆಲವರು ಅವುಗಳನ್ನು ಮಾರಿ ಹಣ ಗಳಿಸುತ್ತಾರೆ. ಇನ್ನು ಕೆಲವರು ಕೇವಲ

ಸೀಮೆಎಣ್ಣೆ ಸಬ್ಸಿಡಿ ಪಡೆಯಲೆಂದೇ ಬೋಟುಗಳನ್ನು ಹೊಂದಿರುತ್ತಾರೆ. ಮೀನುಗಾರಿಕಾ ಇಲಾಖೆ  ಹಾಗೂ ಆದಾಯ ತೆರಿಗೆ ಇಲಾಖೆಗಳಿಗೆ ಇದರ ಬಗ್ಗೆ ಅರಿವಿದ್ದರೂ ಅವರು  ಕಣ್ಣು ಮುಚ್ಚಿ ಕೂತಿರಲು ಬಯಸುತ್ತಾರೆ. “ಇಲ್ಲಿ ದೊಡ್ಡ ಲಾಬಿಯೇ ಇದೆ. ಯಾರಿಗೂ ಇದರ ಗೊಡವೆಗೆ ಹೋಗುವುದು ಬೇಕಿಲ್ಲ. ಅವರು ಬಹಳ ಪ್ರಭಾವಶಾಲಿಗಳಾಗಿರುವುದರಿಂದ ಅಧಿಕಾರಿಗಳೂ ಸುಮ್ಮನಿದ್ದು ಬಿಡುತ್ತಾರೆ” ಎಂದು ಹೇಳಲಾಗುತ್ತಿದೆ.

 

 

 

LEAVE A REPLY