ಆದಿವಾಸಿಗಳು ಏಕೆ ಅಣೆಕಟ್ಟುಗಳನ್ನು ವಿರೋಧಿಸುತ್ತಾರೆ ?

 

ನಗರ ಪ್ರದೇಶಗಳಲ್ಲಿ ಅಥವಾ ಪುನರ್ವಸತಿ ಕೇಂದ್ರಗಳಲ್ಲಿ ದೊರೆಯುವ ಸೌಲಭ್ಯಗಳು ತಮ್ಮ ಮೂಲ ಸ್ಥಳದಲ್ಲೇ ದೊರೆತರೆ ಆದಿವಾಸಿಗಳು ಪುನರ್ವಸತಿಯನ್ನು ಸ್ವಾಗತಿಸುವುದೇ ಇಲ್ಲ.

  • ಶ್ರೀಪಾದ್ ಧರ್ಮಾಧಿಕಾರಿ ಮತ್ತು ನಂದಿನಿ ಓಜಾ

ಗುಜರಾತ್ ನರ್ಮದಾ ಸರೋವರ ಅಣೆಕಟ್ಟು ನಿರ್ಮಾಣವಾದ ನಂತರ ತಮ್ಮ ನೆಲೆ ಕಳೆದುಕೊಂಡ ಸಾವಿರಾರು ಆದಿವಾಸಿಗಳು ಮತ್ತು ಗ್ರಾಮೀಣ ಜನತೆಯ ಬದುಕಿನ ಕುರಿತು ಸ್ವಾಮಿನಾಥನ್ ಅಂಕ್ಲಸಾರಿಯ ಐಯ್ಯರ್ ನೀಡಿರುವ ಮಾಹಿತಿಗಳು ದೋಷಪೂರಿತವಾಗಿದೆ. ಆದಿವಾಸಿಗಳು ಅಣೆಕಟ್ಟುಗಳನ್ನು ಮತ್ತು ತಮ್ಮ ಮೂಲೋತ್ಪಾಟನೆಯನ್ನು ಸ್ವಾಗತಿಸುತ್ತಾರೆ ಎಂಬ ಐಯ್ಯರ್ ಅವರ ಪ್ರತಿಪಾದನೆಯೇ ಹುರುಳಿಲ್ಲದ್ದು ಎಂದು ಅಂಕಿಅಂಶಗಳಿಂದ ತಿಳಿದುಬರುತ್ತದೆ. ಪೂರ್ಣ ಪುನರ್ವಸತಿ ಪಡೆದ ಗ್ರಾಮೀಣ ಜನತೆಯ ಬದುಕು, ಅರ್ಧಂಬರ್ಧ ಸೌಕರ್ಯ ಪಡೆದವರ ಬದುಕಿಗಿಂತಲೂ ಉತ್ತಮವಾಗಿದೆ ಎಂದು ಪ್ರತಿಪಾದಿಸುವ ಐಯ್ಯರ್, ಸರ್ದಾರ್ ಸರೋವರ ಅಣೆಕಟ್ಟಿನ ಪರಿಣಾಮವಾಗಿ ತಮ್ಮ ಮೂಲ ನೆಲೆ ಕಳೆದುಕೊಂಡು 25 ವರ್ಷಗಳಾದರೂ ಸಂಪೂರ್ಣ ಮೂಲ ಸೌಕರ್ಯಗಳನ್ನು ಪಡೆಯಲಾಗದೆ ಪರದಾಡುತ್ತಿರುವ ಗ್ರಾಮೀಣ ಜನರ ದುರ್ಬರ ಬದುಕಿಗೆ ವಿಮುಖರಾದಂತೆ ಕಾಣುತ್ತದೆ. ಉಚ್ಛಾಟಿತರಾದ ಮೂರು ದಶಕಗಳ ನಂತರವೂ ಪುನರ್ವಸತಿ ಪಡೆದಿರುವ ಶೇ 55ರಷ್ಟು ಜನರಿಗೆ ಕುಡಿಯುವ ನೀರು ದೊರೆಯುತ್ತಿಲ್ಲ, ಶೇ 63ರಷ್ಟು ಜನರಿಗೆ ಕನಿಷ್ಟ ಆರೋಗ್ಯ ಸೌಲಭ್ಯವಿಲ್ಲ, ಶೇ 86ರಷ್ಟು ಜನರಿಗೆ ಆಸ್ಪತ್ರೆಗಳು ಲಭ್ಯವಿಲ್ಲ. ಈ ಜನರು ನಗರಗಳ ಸಮೀಪವೇ ಇದ್ದರೂ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಕಾಡುಗಳಲ್ಲಿ, ನದಿ ತೀರಗಳಲ್ಲಿ ಬದುಕುವ ಆದಿವಾಸಿ ಸಮುದಾಯಗಳಿಗೆ ಭೂಮಿ ಮತ್ತು ಅರಣ್ಯ ಸಂಪತ್ತು ಕೇವಲ ಭಾವನತ್ಮಕ ವಸ್ತುಗಳಲ್ಲ. ಈ ನೆಲೆಗಳಲ್ಲಿ ಆದಿವಾಸಿಗಳು ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ. ಪುನರ್ವಸತಿ ಕೇಂದ್ರಗಳಲ್ಲಿರುವ ಬಹುಪಾಲು ಜನರಿಗೆ ಮೂಲ ಸೌಕರ್ಯಗಳೂ ಲಭ್ಯವಾಗದಿರುವುದು ಮತ್ತು ನಗರವಾಸಿಗಳ ಅಸಡ್ಡೆ ಅವರ ಸಮಸ್ಯೆಗಳನ್ನು ಮತ್ತಷ್ಟು ಜಟಿಲಗೊಳಿಸಿದೆ. ಉಚ್ಛಾಟಿತರಾಗಿ ಪುನರ್ವಸತಿ ಪಡೆದಿರುವವರೊಡನೆ ಗ್ರಾಮಗಳಲ್ಲಿ, ಕಾಡಿನ ಹಾಡಿಗಳಲ್ಲಿ ವಾಸವಾಗಿದ್ದವರ ಪೈಕಿ ಶೇ 54ರಷ್ಟು ಜನರು ಪುನರ್ವಸತಿ ಕೇಂದ್ರಗಳಿಗೆ ಹೋಗಲು ಇಚ್ಛಿಸುತ್ತಾರೆ, ಶೇ 35ರಷ್ಟು ಜನರು ಅಲ್ಲಿಯೇ ಬದುಕು ಸವೆಸಲು ಇಷ್ಟಪಡುತ್ತಾರೆ ಎಂದು ಐಯ್ಯರ್ ಹೇಳುತ್ತಾರೆ. ಆದರೆ ಉಚ್ಛಾಟಿತರಾದ ಬಹುಪಾಲು ಜನರು ಪುನರ್ವಸತಿ ಪ್ಯಾಕೇಜುಗಳ ಬಗ್ಗೆ ತಮ್ಮ ಅತೃಪ್ತಿ ವ್ಯಕ್ತಪಡಿಸಿರುವುದನ್ನು ಕಣ್ಣಾರೆ ಕಾಣಬಹುದು. ಗಣಿ ಉದ್ಯಮಗಳು ಇರುವ ಪ್ರದೇಶಗಳಲ್ಲಿ ಆದಿವಾಸಿಗಳು ಮತ್ತು ಗ್ರಾಮೀಣ ಜನತೆ ಬೇರೊಂದು ಸ್ಥಳಕ್ಕೆ ರವಾನೆಯಾಗಲು ಸುಲಭವಾಗಿ ಒಪ್ಪುತ್ತಾರೆ. ಏಕೆಂದರೆ ಗಣಿಗಾರಿಕೆ ಅವರ ಆರೋಗ್ಯವನ್ನು ಮಾತ್ರವೇ ಅಲ್ಲದೆ, ಜೀವನವನ್ನೂ ನಾಶ ಮಾಡುತ್ತದೆ. ಬಹುಪಾಲು ಆದಿವಾಸಿಗಳು ತಮ್ಮ ಉತ್ತಮ ಭವಿಷ್ಯದ ದೃಷ್ಟಿಯಿಂದ ಅರಣ್ಯಗಳನ್ನು ತೊರೆಯಲು ಇಚ್ಚಿಸುತ್ತಾರೆ ಎಂಬ ಐಯ್ಯರ್ ಅವರ ಅಭಿಪ್ರಾಯ ದೋಷಪೂರಿತವಾಗಿದೆ.

ಆದಿವಾಸಿಗಳ ಜೀವನ ಉತ್ತಮವಾಗಬೇಕಾದರೆ ಅರಣ್ಯಗಳನ್ನು ತೊರೆಯಲೇಬೇಕೆಂದಿಲ್ಲ. ಅಲ್ಲಿಯೆ ಉತ್ತಮ ರಸ್ತೆ, ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಬದುಕನ್ನು ಹಸನುಗೊಳಿಸಬಹುದಲ್ಲವೇ ? ನಗರ ಪ್ರದೇಶಗಳಲ್ಲಿ ಅಥವಾ ಪುನರ್ವಸತಿ ಕೇಂದ್ರಗಳಲ್ಲಿ ದೊರೆಯುವ ಸೌಲಭ್ಯಗಳು ತಮ್ಮ ಮೂಲ ಸ್ಥಳದಲ್ಲೇ ದೊರೆತರೆ ಆದಿವಾಸಿಗಳು ಪುನರ್ವಸತಿಯನ್ನು ಸ್ವಾಗತಿಸುವುದೇ ಇಲ್ಲ. ಬಹುಶಃ ಐಯ್ಯರ್ ಈ ವಾಸ್ತವವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದಂತಿದೆ.