ಬೆಂಗಳೂರಿನಲ್ಲೇಕೆ ಟ್ರಾಫಿಕ್ ಜಾಮ್ ?

ಬೆಂಗಳೂರಿನಲ್ಲಿ ದಿನಕ್ಕೆ 3500 ವಾಹನಗಳ ನೋಂದಣಿಯಾಗುತ್ತಿದ್ದು ಅಧಿಕಾರಿಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಹೊಸ ವಾಹನಗಳನ್ನು ತಡೆಗಟ್ಟಬೇಕು ಎಂದು ತಜ್ಞರು ಪ್ರತಿಪಾದಿಸುತ್ತಾರೆ.

ವಿಶೇಷ ವರದಿ

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚಿತವಾಗುತ್ತಿರುವ ವಿಷಯ ಎಂದರೆ ಸಂಚಾರ ವ್ಯವಸ್ಥೆ ಮತ್ತು ರಸ್ತೆ ಸಂಚಾರದ ಅವ್ಯವಸ್ಥೆಗಳು ಎಂದು ದಕ್ಷಿಣ ಭಾರತದ ಪ್ರಸಿದ್ಧ ನಗರಿಯಲ್ಲಿ ಹತ್ತು ದಿನಗಳ ಕಾಲ ಕಳೆದ ಬಿಬಿಸಿ ವಕ್ತಾರರಾದ ಗೀತಾ ಪಾಂಡೆ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಸಿದ್ಧ ಲೇಖಕ ಜೆಫ್ರಿ ಆರ್ಚರ್ ಸಹ ಬೆಂಗಳೂರು ಸಂಚಾರ ಅವ್ಯವಸ್ಥೆಯ ರುಚಿ ಕಂಡಿದ್ದರು. ಫುಟ್ಪಾತಿನಲ್ಲಿ ನಡೆಯುತ್ತಿದ್ದ ಮಹಿಳೆಯೊಬ್ಬರು ತಮ್ಮ ಕಾರನ್ನು ಮತ್ತು ತಾವು ಮಹಿಳೆಯನ್ನು ಎಂಟು ಬಾರಿ ಓವರ್‍ಟೇಕ್ ಮಾಡಿದ್ದನ್ನು ಆರ್ಚರ್ ಸಾರ್ವಜನಿಕ ಸಭೆಯಲ್ಲಿ ವಿವರಿಸುತ್ತಿದ್ದರು. ಇದು ಪ್ರೇಕ್ಷಕರಿಗೆ ತಮಾಷೆಯಾಗಿ ಕಂಡರೂ ಬೆಂಗಳೂರಿನ ನಿವಾಸಿಗಳಿಗೆ ಇದು ನಿತ್ಯಕರ್ಮ.

ಒಂದು ವರದಿಯ ಪ್ರಕಾರ ಬೆಂಗಳೂರಿನ ನಿವಾಸಿಗಳು ಪ್ರತಿವರ್ಷ 240 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಅನುಭವಿಸಿರುತ್ತಾರೆ. ಬೆಂಗಳೂರಿನಲ್ಲಿ ವಾಹನ ಚಲಾಯಿಸುವುದಕ್ಕಿಂತಲೂ ನಡೆದು ಹೋಗುವುದೇ ಒಳಿತು ಎನ್ನುತ್ತಾರೆ ಸಂಚಾರ ತನ್ಞ ಪ್ರೊ ಎಂ ಎನ್ ಶ್ರೀಹರಿ.

2005ರಲ್ಲಿ ಬೆಂಗಳೂರಿನ ಸರಾಸರಿ ಸಂಚಾರಿ ವೇಗ ಗಂಟೆಗೆ 35 ಕಿಲೋಮೀಟರ್(22 ಮೈಲಿ) ಇತ್ತು. 2014ರಲ್ಲಿ ಇದು 9.2 ಕಿಮೀ (5.7 ಮೈಲಿ)ಗೆ ಇಳಿದಿದೆ ಎಂದು ಹೇಳಿರುವ ಸಂಶೋಧನಾ ಸಂಸ್ಥೆಯ ಪವನ್ ಮುಲಿಕುಟ್ಲಾ, ಎರಡು ಮೂರು ನಿಮಿಷಗಳ ಕಾಲ ಕಾಯಬೇಕಾದ ಸಂಚಾರಿ ಜಂಕ್ಷನ್ನುಗಳಲ್ಲಿ ಈಗ ಐದು ನಿಮಿಷಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ ಎನ್ನುತ್ತಾರೆ. ಇಂದಿನ ಪರಿಸ್ಥಿತಿಯಲ್ಲಿ ಪೀಕ್ ಅವರಿನಲ್ಲಿ ಹೊರ ವಲಯ ವರ್ತುಲ ರಸ್ತೆಯಲ್ಲಿ ಗಂಟೆಗೆ 4-5 ಕಿ ಮೀ ವೇಗದಲ್ಲಿ ಮಾತ್ರ ಸಂಚರಿಸಬಹುದಾಗಿದೆ.

ಪ್ರತಿ ವ್ಯಕ್ತಿಯೂ ವರ್ಷಕ್ಕೆ  240 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಎದುರಿಸುವುದರಿಂದ ಸಂಚಾರ ಅವ್ಯವಸ್ಥೆಯ ಪರಿಣಾಮವಾಗಿ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ 65 ಶತಕೋಟಿ ರೂ ನಷ್ಟವಾಗುತ್ತಿದೆ ಎಂದು ಶ್ರೀಹರಿ ಹೇಳುತ್ತಾರೆ.

ಬೆಂಗಳೂರಿನ ಸಂಚಾರ ವ್ಯವಸ್ಥೆ ಏಕೆ ಹೀಗೆ ಅಸ್ತವ್ಯಸ್ಥವಾಗುತ್ತಿದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುವುದು ಸಹಜ. ಸೂಕ್ತ ಯೋಜನೆ ಮತ್ತು ಸಿದ್ಧತೆ ಇಲ್ಲದೆ ಬೆಂಗಳೂರು ನಗರ ವ್ಯಾಪಕವಾಗಿ ಬೆಳೆಯುತ್ತಿರುವುದೇ ಸಂಚಾರ ಅವ್ಯವಸ್ಥೆಗೆ ಕಾರಣ ಎಂದು ಬಹುಪಾಲು ಜನರು ಅಭಿಪ್ರಾಯಪಡುತ್ತಾರೆ.

ಮಾಹಿತಿ ತಂತ್ರಜ್ಞಾನ ಉದ್ಯಮದ ಕೇಂದ್ರ ಬಿಂದುವಾಗಿರುವ ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎಂದೂ ಕರೆಯಲಾಗುತ್ತದೆ. 1990ರ ನಂತರದಲ್ಲಿ ಬೆಂಗಳೂರಿನಲ್ಲಿ ನೂರಾರು ತಂತ್ರಜ್ಞಾನ ಉದ್ಯಮ ಕೇಂದ್ರಗಳು ಸ್ಥಾಪನೆಗೊಂಡವು. ಇದರೊಂದಿಗೆ ಈ ಉದ್ಯಮಕ್ಕೆ ಪೂರಕವಾದ ಉಪಕಸುಬು ಮತ್ತು ಸಣ್ಣ ಪ್ರಮಾಣದ ಪೂರಕ ಉದ್ದಿಮೆಗಳೂ ಆರಂಭವಾದವು. ಹಾಗಾಗಿ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಬೆಂಗಳೂರಿಗೆ ನೌಕರಿ ಅರಸಿ ವಲಸೆ ಬರಲಾರಂಭಿಸಿದರು. ತತ್ಪರಿಣಾಮ 2001ರಲ್ಲಿ 87 ಲಕ್ಷ ಇದ್ದ ಬೆಂಗಳೂರಿನ ಜನಸಂಖ್ಯೆ ಇಂದು 1 ಕೋಟಿ 15 ಲಕ್ಷ ಆಗಿದೆ ಎನ್ನುತ್ತಾರೆ ಬೆಂಗಳೂರು ನಿವಾಸಿ ರವಿಚಂದರ್.

ಜನಸಂಖ್ಯೆ ಎರಡರಷ್ಟಾಗಿದ್ದರೆ ಮೂಲ ಸೌಕರ್ಯಗಳು ಪೂರಕವಾಗಿ ಬೆಳವಣಿಗೆ ಹೊಂದಿಲ್ಲ ಎಂದು ಮುಲಿಕುಟ್ಲಾ ಆರೋಪಿಸುತ್ತಾರೆ. ಸುಮಾರು 7000 ಸಾರ್ವಜನಿಕ ಸಾರಿಗೆ ವಾಹನಗಳು ನಗರದ ಶೇ 45ರಷ್ಟು ಸಂಚಾರವನ್ನು ನಿರ್ವಹಿಸುತ್ತವೆ. ಮೆಟ್ರೋ ನಿರ್ಮಾಣ ನಿಧಾನಗತಿಯಲ್ಲಿ ಸಾಗುತ್ತಿದ್ದು 2007ರಲ್ಲಿ ಆರಂಭವಾದ ಮೆಟ್ರೋ ರೈಲು ನಿರ್ಮಾಣ ಈವರೆಗೂ 28 ಕಿಲೋಮೀಟರಿನಷ್ಟು ಸಂಚಾರಕ್ಕೆ ಮುಕ್ತಗೊಳಿಸಿದೆ. ಎರಡನೆಯ ಹಂತದ ನಿರ್ಮಾಣ ಇನ್ನೂ ಆರಂಭವಾಗಿಯೇ ಇಲ್ಲ. ಹಾಗಾಗಿ ಬಹುಪಾಲು ಜನರು ಖಾಸಗಿ ಸಂಚಾರ ವ್ಯವಸ್ಥೆಯನ್ನೇ ಅವಲಂಬಿಸುತ್ತಾರೆ.

ಬೆಂಗಳೂರಿನಲ್ಲಿ ಒಟ್ಟು 66 ಲಕ್ಷ ಖಾಸಗಿ ವಾಹನಗಳಿವೆ. ಇವುಗಳ ಪೈಕಿ ಹತ್ತು ಲಕ್ಷ ಕಾರುಗಳಿವೆ ಎನ್ನುತ್ತಾರೆ ಶ್ರೀಹರಿ. ಇದರೊಂದಿಗೆ ಪ್ರತಿವರ್ಷ ಹತ್ತು ಲಕ್ಷ ವಾಹನಗಳು ನೋಂದಾಯಿಸಲ್ಪಡುತ್ತವೆ. ಈ ಸಮಸ್ಯೆಯನ್ನು ಇನ್ನೂ ಜಟಿಲಗೊಳಿಸುವ ಸಂಗತಿ ಎಂದರೆ ನಗರದ ರಸ್ತೆಗಳ ಶೇ 35ರಷ್ಟು ಸ್ಥಳವನ್ನು ಪಾರ್ಕಿಂಗ್ ಮತ್ತು ಒತ್ತುವರಿಗಾಗಿ ಬಳಸಲಾಗುತ್ತಿದೆ. ಸಂಚಾರಕ್ಕಾಗಿ ಇರುವ ರಸ್ತೆಗಳೆಲ್ಲವೂ ಪಾರ್ಕಿಂಗ್ ಸ್ಥಳಗಳಾಗಿದ್ದು ಫುಟ್ಪಾತುಗಳನ್ನು ಸಣ್ಣ ಅಂಗಡಿಗಳು ಆಕ್ರಮಿಸಿಕೊಂಡಿವೆ ಇನ್ನು ಸಂಚಾರಕ್ಕೆ ಜಾಗ ಎಲ್ಲಿಯದು ಎಂದು ಹರೀಶ್ ಪ್ರಶ್ನಿಸುತ್ತಾರೆ.

ಬೆಂಗಳೂರಿನಲ್ಲಿ ದಿನಕ್ಕೆ 3500 ವಾಹನಗಳ ನೋಂದಣಿಯಾಗುತ್ತಿದ್ದು ಅಧಿಕಾರಿಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಹೊಸ ವಾಹನಗಳನ್ನು ತಡೆಗಟ್ಟಬೇಕು ಎಂದು ತಜ್ಞರು ಪ್ರತಿಪಾದಿಸುತ್ತಾರೆ. ಕಾರು ಖರೀದಿಸುವವರಿಗೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಮತ್ತು ಪಾರ್ಕಿಂಗ್ ಶುಲ್ಕ ಹೆಚ್ಚಿಸುವ ಮೂಲಕ ಸಂಚಾರ ಸಮಸ್ಯೆ ನೀಗಲು ಸಾಧ್ಯ ಎಂದು ಹರೀಶ್ ಹೇಳುತ್ತಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಬಂಡವಾಳ ಹೂಡುವ ಮೂಲಕ ಕನಿಷ್ಠ ಹತ್ತು ಸಾವಿರ ಬಸ್ಸುಗಳ ಸಂಚಾರವಾದರೆ ಸಮಸ್ಯೆ ಪರಿಹಾರ ಕಾಣಬಹುದು ಎನ್ನುತ್ತಾರೆ ರವಿಚಂದರ್. ಬೆಂಗಳೂರಿನ ಮೂಲ ಸಮಸ್ಯೆಗಳನ್ನು ಬಗೆಹರಿಸಲು ಸಮಗ್ರ ನೀತಿ ಯೋಜನೆಯ ಅವಶ್ಯಕತೆ ಇದ್ದು ಸದ್ಯಕ್ಕೆ ಇದು ಸಾಕಾರಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.