ಮಗ ಯಾಕೆ ಮಂಕಾಗಿರಬಹುದು?

ಪ್ರ : ನಮ್ಮದು ಚಿಕ್ಕ ಸಂಸಾರ. ನಾವಿಬ್ಬರೂ ಕೆಲಸಕ್ಕೆ ಹೋಗುವುದರಿಂದ ಮನೆಯಲ್ಲಿ ಎಲ್ಲಾ ಸೌಕರ್ಯಗಳನ್ನೂ ಮಾಡಿಕೊಂಡಿದ್ದೇವೆ. ನಮಗಿರುವ ಐದನೇ ತರಗತಿಯಲ್ಲಿ ಓದುತ್ತಿರುವ ಒಬ್ಬನೇ ಮಗ ಕೂಡಾ ಕಲಿಯುವುದರಲ್ಲಿ ಬುದ್ಧಿವಂತ. ಯಾವ ತಲೆಬಿಸಿಯಿಲ್ಲದೇ ಜೀವನ ನಡೆದುಕೊಂಡು ಹೋಗುತ್ತಿತ್ತು. ಆದರೆ ಈಗ ಕೆಲವು ದಿನಗಳಿಂದ ನನ್ನ ಮಗ ಸ್ವಲ್ಪ ಮಂಕಾಗಿರುತ್ತಾನೆ. ಕೇಳಿದರೆ ಏನೂ ಹೇಳುತ್ತಿಲ್ಲ. ನನ್ನವರ ಅಕ್ಕನ ಮಗಳು ಈ ವರ್ಷ ಕಾಲೇಜಿಗೆ ಇದೇ ಊರಿನಲ್ಲಿ ಸೇರಿಕೊಂಡಿದ್ದಾಳೆ. ನಮ್ಮ ಮನೆಯಿರುವಾಗ ಹಾಸ್ಟೇಲಿನಲ್ಲಿರುವುದು ಯಾಕೆ ಅಂತ ನಾವೇ ಒತ್ತಾಯಿಸಿ ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೇವೆ. ಅವಳು ಬಂದ ಸಮಯದಲ್ಲಿ ಸರಿಯಾಗಿಯೇ ಇದ್ದಳು. ನನ್ನ ಮಗನನ್ನು ಸ್ವಂತ ತಮ್ಮನಂತೆ ನೋಡುತ್ತಿದ್ದಳು. ಅವನಿಗೆ ಹೋಂವರ್ಕಿನಲ್ಲಿ ಸಹಾಯ ಕೂಡಾ ಮಾಡುತ್ತಿದ್ದಳು. ನನ್ನ ಮಗನಿಗೂ ಒಬ್ಬಳು ಜೊತೆ ಸಿಕ್ಕಿದ್ದು ನಮಗೆ ಸಮಾಧಾನದ ವಿಷಯವಾಗಿತ್ತು. ಆದರೆ ಕಳೆದ ಕೆಲವು ತಿಂಗಳಿಂದ ಆ ಹುಡುಗಿಯ ವರ್ತನೆಯೇ ಬದಲಾಗಿದೆ. ಟೀವಿ ಹುಚ್ಚು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಫ್ರೆಂಡ್ಸ್ ಜೊತೆ ಅಲೆಯುವುದೂ ಹೆಚ್ಚಾಗಿದೆ. ಮೈತೋರಿಸುವ ಡ್ರೆಸ್ ತೊಡಲೂ ಶುರುಮಾಡಿದ್ದಾಳೆ. ತನ್ನ ಲ್ಯಾಪ್‍ಟಾಪಿನಲ್ಲಿ ಕದ್ದುಮುಚ್ಚಿ ಏನೋ ನೋಡುತ್ತಿರುವುದನ್ನೂ ಗಮನಿಸಿದ್ದೇನೆ. . ನನ್ನ ಮಗನನ್ನು ವಿಚಿತ್ರ ರೀತಿಯಲ್ಲಿ ಮುದ್ದಿಸಲೂ ತೊಡಗಿದ್ದಾಳೆ. ಅವನ ಕೆನ್ನೆಯ ಮೇಲೆ ಕಚ್ಚಿದ ಗುರುತೂ ಕಾಣಿಸುತ್ತಿದೆ. ಮಗನನ್ನು ಕೇಳಿದರೆ ಹೇಗಾಯಿತೋ ಗೊತ್ತಿಲ್ಲ ಅನ್ನುತ್ತಾನೆ. ಮೊದಲೆಲ್ಲ ಅವರಿಬ್ಬರೂ ಒಂದೇ ರೂಮಿನಲ್ಲಿ ಮಲಗುತ್ತಿದ್ದರು. ಈಗೀಗ ನನ್ನ ಮಗ ಹಾಲಿನಲ್ಲಿಯೇ ಮಲಗುತ್ತೇನೆ ಅಂತ ಹಠ ಹಿಡಿಯುತ್ತಿದ್ದಾನೆ. ಅವಳ ಹತ್ತಿರ ಹೆಚ್ಚು ಬೆರೆಯುತ್ತಲೂ ಇಲ್ಲ. ಆದರೆ ಅವಳು ಅವನಿಗೆ ಇಷ್ಟವಿಲ್ಲದಿದ್ದರೂ ಅವನನ್ನು ಅಂಟಿಕೊಂಡಿರಲು ಪ್ರಯತ್ನಿಸುತ್ತಾಳೆ. ನನ್ನ ಮಗ ಅವಳಿದ್ದಷ್ಟು ಹೊತ್ತು ಮನೆಯಲ್ಲಿರಲೂ ಬಯಸುವುದಿಲ್ಲ. ನೆರೆಮನೆಯಲ್ಲಿಯೇ ಇರುವ ಅವನ ಗೆಳೆಯನ ಜೊತೆಯೇ ಇರುತ್ತಾನೆ. ನನ್ನ ಮಗನಿಗೆ ಅವಳಿಂದ ಏನೋ ತೊಂದರೆಯಾಗಿದೆ ಅಂತ ನನ್ನ ತಾಯಿ ಮನಸ್ಸು ಹೇಳುತ್ತಿದೆ. ಮಗ ಏನೂ ಹೇಳುತ್ತಿಲ್ಲ. ನಮ್ಮವರು ಬರುವುದು ರಾತ್ರಿಯಾದ್ದರಿಂದ ಅವರಿಗೆ ಇದೆಲ್ಲ ಸೂಕ್ಷ್ಮಗಳು ಅರ್ಥವೂ ಆಗುವುದಿಲ್ಲ. ಅದೂ ಅಲ್ಲದೇ ಅವಳನ್ನು ಮಗಳಂತೆ ನೋಡಿಕೋ ಅಂತ ಮೊದಲೇ ನನಗೆ ಸೂಚನೆಯನ್ನೂ ಕೊಟ್ಟಿರುವುದರಿಂದ ಅವಳ ಬಗ್ಗೆ ಏನೇ ಹೇಳಿದರೂ ಅವರು ನನ್ನನ್ನೇ ದೋಷಿಯನ್ನಾಗಿ ನೋಡಬಹುದು. ಮಗನ ನಗುಮುಖ ನೋಡದೇ ಹಲವು ದಿನಗಳಾದವು. ಹೇಗೆ ಈ ಸಮಸ್ಯೆಯಿಂದ ಪಾರಾಗಲಿ?

ಉ : ಲೈಂಗಿಕ ಪೀಡನೆ ಹೆಣ್ಣುಮಕ್ಕಳಿಗೆ ಮಾತ್ರ ಆಗುವುದಲ್ಲ, ಚಿಕ್ಕ ಹುಡುಗರಿಗೂ ಆಗುತ್ತದೆ ಅಂತ ಆಗಾಗ ಸುದ್ದಿಬರುತ್ತಿರುತ್ತದಲ್ಲಾ. ನಿಮ್ಮ ಮಗನೂ ಲೈಂಗಿಕ ಕಿರುಕುಳದಿಂದಲೇ ಹಾಗಾಗಿದ್ದಾನೆ ಅನ್ನುವುದರಲ್ಲಿ ಅನುಮಾನವೇ ಬೇಡ. ಮೊದಲೆಲ್ಲ ನಿಮ್ಮ ಅತ್ತಿಗೆಯ ಮಗಳ ಜೊತೆ ಚೆನ್ನಾಗಿದ್ದವನು ಈಗೀಗ ಅವಳನ್ನು ಅವಾಯ್ಡ್ ಮಾಡುತ್ತಿದ್ದಾನೆ ಅಂದರೆ ಅವಳಿಂದಲೇ ಅವನಿಗೆ ತೊಂದರೆಯಾಗುತ್ತಿದೆ. ಅವಳೀಗಷ್ಟೇ ಯೌವನಕ್ಕೆ ಕಾಲಿಟ್ಟಿದ್ದಾಳೆ. ಅದಕ್ಕೆ ಸರಿಯಾಗಿ ಸಿಟಿ ಜೀವನ ನೋಡದಿದ್ದವಳು ಇಲ್ಲಿಯ ಥಳುಕುಬಳುಕಿಗೆ ಆಕರ್ಷಿತಳಾಗಿ ಜೀವನದಲ್ಲಿ ಎಲ್ಲಾ ತರದ ಸುಖಕ್ಕೋಸ್ಕರ ಹಾತೊರೆಯುತ್ತಿದ್ದಾಳೆ. ಟೀವಿ, ಸಿನಿಮಾದ ಪ್ರಭಾವವೂ ಅವಳ ಮೇಲೆ ಸಾಕಷ್ಟಾಗಿದೆ. ಸ್ನೇಹಿತರ ಬಳಗವೂ ಸರಿಯಿಲ್ಲದಿದ್ದರಂತೂ ಬೇಗ ಹಾಳಾಗಿಬಿಡುತ್ತಾರೆ. ಬಹುಶಃ ಕಂಪ್ಯೂಟರಿನಲ್ಲಿಯೂ ಪೋರ್ನೋ ನೋಡುವ ಹುಚ್ಚೂ ಬೆಳೆಸಿಕೊಂಡಿರಬೇಕು. ಅದೆಲ್ಲವನ್ನೂ ನಿಮ್ಮ ಮಗನ ಮೇಲೆ ಪ್ರಯೋಗಿಸಲು ನೋಡುತ್ತಿರಬಹುದು. ಅವನ ಮುಖದಲ್ಲಿರುವ ಕಚ್ಚಿದ ಗುರುತು ಗಮನಿಸಿಯೂ ನಿಮಗಿನ್ನೂ ಅರ್ಥವಾಗಿಲ್ಲವೇ? ಮೊದಲು ನಿಮ್ಮ ಮಗನನ್ನು ಅವಳಿಂದ ದೂರ ಇರಿಸಿ. ನಿಮ್ಮ ಗಂಡನಿಗೆ ಅಪತ್ಯವಾದರೂ ನೀವು ಈ ವಿಷಯವನ್ನು ಅವರ ಗಮನಕ್ಕೆ ತರಲೇಬೇಕು. ಆ ಹುಡುಗಿಗೂ ನೀವಿಬ್ಬರೂ ಸೇರಿ ಬುದ್ಧಿ ಹೇಳಿ. ನಿಮ್ಮ ಮಗನನ್ನು ಅವಳಿಂದ ಕಾದುಕೊಳ್ಳುವ ಜೊತೆ ಆ ಹುಡುಗಿಯೂ ಸರಿಯಾದ ದಾರಿಯಲ್ಲಿ ಹೋಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಿಮ್ಮ ಮೇಲೆ ಇದೆ. ಅವಳ ನಡೆವಳಿಕೆ ನೋಡಿದರೆ ಮುಂದೆ ಯಾರದ್ದಾದರೂ ಗೆಳೆತನ ಮಾಡಿಕೊಂಡು ಕಷ್ಟಕ್ಕೆ ಸಿಕ್ಕಿಕೊಳ್ಳುವ ಸೂಚನೆ ಕಾಣುತ್ತಿದೆ. ಈಗಲೇ ಅವಳಿಗೆ ಒಳಿತುಕೆಡಕುಗಳ ಬಗ್ಗೆ ವಿವರಿಸುವುದು ಒಳ್ಳೆಯದು. ಮತ್ತೂ ಸಮಸ್ಯೆಯಾದರೆ ಅವಳ ಪಾಲಕರಿಗೂ ವಿಷಯ ತಿಳಿಸಿ ಅವಳ ಜವಾಬ್ದಾರಿಯನ್ನು ಅವರಿಗೇ ಒಪ್ಪಿಸುವುದು ಒಳ್ಳೆಯದು.